ನ್ಯೂಸ್

VIDEO: ಏಕಾಂಗಿಯಾಗಿ ಪಾರ್ಕ್​​ಗೆ ಹೋಗಿ 60 ಅಡಿ ಎತ್ತರ ಮರ ಏರಿ ಕುಳಿತ ವ್ಯಕ್ತಿ...!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ವಿಡಿಯೋಗಳು, ಫೋಟೋಗಳು ನಮ್ಮಲ್ಲಿ ನಗು ಮೂಡಿಸುವುದಂತೂ ಸುಳ್ಳಲ್ಲ. ಅದೆಷ್ಟೆಷ್ಟೋ ವಿಲಕ್ಷಣ ಘಟನೆಗಳು, ಮನುಷ್ಯರನ್ನು ಈ ಸೋಷಿಯಲ್ ಮಿಡಿಯಾಗಳು ತೆರೆದಿಡುತ್ತವೆ.

ಈಗ ಯುಕೆಯ ಬಾತ್​​ನಲ್ಲಿರುವ ರಾಯಲ್ ವಿಕ್ಟೋರಿಯಾ ಪಾರ್ಕ್​ನಲ್ಲಿ ಸೆರೆ ಹಿಡಿಯಲಾದ ವಿಡಿಯೋ ನಿಮ್ಮನ್ನು ನಗಿಸದಿದ್ದರೆ ಕೇಳಿ...!

ವ್ಯಕ್ತಿಯೋರ್ವ ಒಬ್ಬನೇ ಪಾರ್ಕ್​ಗೆ ಬಂದಿದ್ದಾನೆ. ಹೀಗೆ ಬಂದವನು ಪಾರ್ಕ್​ನ ಕಲ್ಲುಬೆಂಚ್​ಗಳ ಮೇಲೆ ಕೂರಲಿಲ್ಲ...ಹುಲ್ಲಿನ ನೆಲದ ಮೇಲೆ ಕುಳಿತುಕೊಳ್ಳಲಿಲ್ಲ. ಬದಲಿಗೆ ಬರೋಬ್ಬರಿ 60 ಅಡಿ ಎತ್ತರ ಮರ ಹತ್ತಿ, ಅದರ ತುತ್ತತುದಿಯಲ್ಲಿ ಬಿಂದಾಸ್​ ಆಗಿ ಕುಳಿತುಕೊಂಡಿದ್ದಾನೆ. ಅವನು ಮರ ಹತ್ತಿ ಕುಳಿತು ಸ್ಯಾಂಡ್​ ವಿಚ್​ನಂತಹ ತಿಂಡಿ ತಿನ್ನುತ್ತಿರುವುದನ್ನು ಅದೇ ಪಾರ್ಕ್​​ನಲ್ಲಿದ್ದ ಯುವಕರ ಗುಂಪು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದೆ.

ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಹೇಗೇ ಹೋದ. ಅವನ ಬಳಿ ಬೈನಾಕ್ಯುಲರ್​ ಇದ್ದಂತೆ ತೋರುತ್ತಿದೆ. ಕೊವಿಡ್​-19 ಇರುವುದರಿಂದ ಸೋಷಿಯಲ್​ ಡಿಸ್ಟನ್ಸ್​ ಸಾಮಾನ್ಯ. ಆದರೆ ಈ ಪರಿಯ ಅಂತರ ಕಾಯ್ದುಕೊಳ್ಳುವುದಾ? ಎಂದು ವಿಡಿಯೋ ಪೋಸ್ಟ್​ ಮಾಡಿದವನು ಹೇಳಿದ್ದಾನೆ.

ವಿಡಿಯೋ ನೋಡಿದವರಂತೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗು ತಡೆಯಲು ಸಾಧ್ಯವೇ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇಡೀ ಪಾರ್ಕ್​ ಕಣ್ತುಂಬಿಕೊಳ್ಳಲು ಮರ ಏರಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)