ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ್ದ ಯುವಕನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಹೆತ್ತವರು, ಅತೀವ ದುಃಖದಲ್ಲಿಯೂ ಆತನ ಕಣ್ಣುಗಳನ್ನು ದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಘಟನೆ ದೊಡ್ಡಬಳ್ಳಾಪುರದ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಸಂಭವಿಸಿದ್ದು, ಸಾವಿಗೀಡಾದ ಯುವಕನನ್ನು ಮುನೇಗೌಡ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ರೋಹಿತ್-ಕೊಹ್ಲಿಗೆ ಏಕೆ ವಿಶ್ರಾಂತಿ ಕೊಟ್ಟಿದ್ದೀರಿ? ಆ ಸಮಸ್ಯೆ ಬಂದ್ರೆ ಯಾರು ಹೊಣೆ? ಮಾಜಿ ಕ್ರಿಕೆಟಿಗನಿಂದ ಟೀಕೆ
ಅಪಘಾತದಲ್ಲಿ ದಿಢೀರ್ ಸಾವನ್ನಪ್ಪಿದ ಯುವಕ ಮುನೇಗೌಡ ತನ್ನ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರ ಬಾಳಲ್ಲಿ ಬೆಳಕಾಗಿದಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ತಿಮ್ಮಸಂದ್ರ ಗ್ರಾಮದ ಮುನೇಗೌಡ (34) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಆಗಸ್ಟ್ 12ರ ರಾತ್ರಿ 8 ಗಂಟೆ ಸುಮಾರಿಗೆ ಬೈಕ್ನಲ್ಲಿ ಮನೆಗೆ ಬರುವಾಗ ಆಕ್ಸಿಡೆಂಟ್ ನಡೆದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬ್ರೈನ್ ಡೆಡ್ ಹಿನ್ನಲೆ ವೈದ್ಯರು ಮುನೇಗೌಡ ಸಾವನ್ನು ದೃಢಪಡಿಸಿದರು.
ಮೃತ ಯುವಕನಿಗೆ ಮದುವೆಯ ನಿಶ್ಚಿತಾರ್ಥವಾಗಿದ್ದು, ಇದೇ ತಿಂಗಳು ವಿವಾಹ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಆದರೆ ಶುಭ ಸಂದರ್ಭಕ್ಕೂ ಮುನ್ನವೇ ಮುನೇಗೌಡ ಅಪಘಾತದಲ್ಲಿ ಸಾವನ್ನಪ್ಪಿದ್ದು, ಇದೀಗ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.