Wildlife Park Incident: ಇಂಗ್ಲೆಂಡ್‌ನ ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಲಿ ಆವರಣದೊಳಗೆ ವ್ಯಕ್ತಿಯೊಬ್ಬರು ಹೋದಾಗ ಹುಲಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಂಗ್ಲೆಂಡ್‌ನ ಡೊಂಕಾಸ್ಟರ್ ಸಮೀಪದ ವನ್ಯಜೀವಿ ಉದ್ಯಾನದಲ್ಲಿರುವ ಹುಲಿ ಆವರಣದೊಳಗೆ ವ್ಯಕ್ತಿಯೊಬ್ಬರು ಹೋಗಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ತುರ್ತು ಸೇವೆಗಳ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಯಾರು ಅನ್ನೋದನ್ನ ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅವರು ಹುಲಿ ಆವರಣದೊಳಗೆ ಹೇಗೆ ಹೋದರು, ಅದಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ.
ವ್ಯಕ್ತಿಯೊಬ್ಬರು ಹುಲಿ ಆವರಣದೊಳಗೆ ಇದ್ದಂತೆ ಕಾಣಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ರೆ, ಈ ವಿಡಿಯೋದ ನಿಖರತೆ ಮತ್ತು ಘಟನೆಯ ಹಿಂದಿನ ಸಂಪೂರ್ಣ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಇಂಥ ಆಘಾತಕಾರಿ ದೃಶ್ಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಈ ಘಟನೆಯಲ್ಲಿ ಹುಲಿಗೆ ಯಾವುದೇ ಗಾಯವಾಗಿಲ್ಲ. ಸಾರ್ವಜನಿಕರಿಗೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನದಲ್ಲಿದ್ದವರನ್ನ ಹೊರಗೆ ಕಳುಹಿಸಲಾಗಿದೆ. ಇತ್ತ, ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್ ಆಡಳಿತ ತನಿಖೆಗೆ ಅಧಿಕಾರಿಗಳಿಗೆ ಸಹಕರಿಸುತ್ತಿದೆ. ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದವರೆಗೆ ಉದ್ಯಾನವನ್ನ ಮುಚ್ಚುವುದಾಗಿ ಘೋಷಿಸಿದೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಕೆಲವರು ಸಂತಾಪ ಸೂಚಿಸಿದ್ದಾರೆ. ಇನ್ನು ಕೆಲವರು, ಹುಲಿ ತನ್ನ ಸಹಜ ಪ್ರವೃತ್ತಿಯಂತೆ ವರ್ತಿಸಿದೆ, ಅದನ್ನ ದೂಷಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿ ಹುಲಿ ಆವರಣದೊಳಗೆ ಹೇಗೆ ಹೋದರು ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)