ಫೋನಿಕ್ಸ್: ಕರೊನಾ ವೈರಸ್ ಮೂಲಕ ಹರಡುವ COVID-19 ಸೋಂಕಿಗೆ ಸೆಲ್ಫ್ ಮೆಡಿಕೇಷನ್ ಮಾಡಿಕೊಂಡ ದಂಪತಿ ಪೈಕಿ ಪತಿ ಸಾವನ್ನಪ್ಪಿ, ಪತ್ನಿ ಗಂಭೀರ ಸ್ಥಿತಿ ತಲುಪಿದ ಮನಕಲಕುವ ದುರಂತ ಅಮೆರಿಕದ ಅರಿಝೋನಾದ ಫೋನಿಕ್ಸ್ನಲ್ಲಿ ನಡೆದಿದೆ. ಈ ದುರಂತಕ್ಕೆ ಪ್ರಭಾವಿಯೊಬ್ಬರ ಟ್ವೀಟ್ ಪರೋಕ್ಷ ಕಾರಣ ಎಂಬ ಮಾತು ಕೇಳಿಬಂದಿದೆ. ಆದಾಗ್ಯು, ಡಾಕ್ಟರ್ ಶಿಫಾರಸು ಇಲ್ಲದೇ ಸೆಲ್ಫ್ ಮೆಡಿಕೇಷನ್ ಮಾಡಿದ್ದು ಕಾನೂನು ಪ್ರಕಾರ ಅಪರಾಧವೇ ಆಗಿದ್ದು, ಇಂತಹ ಪ್ರಯತ್ನಕ್ಕೆ ಯಾರೂ ಕೈ ಹಾಕಬಾರದು ಎಂಬುದು ವಿಜಯವಾಣಿಯ ಕಳಕಳಿ.
ಫೋನಿಕ್ಸ್ನಲ್ಲಿ ದುರ್ಮರಣಕ್ಕೆ ಈಡಾದ ವ್ಯಕ್ತಿಯ ವಿವರಗಳನ್ನು ಅಲ್ಲಿನ ಸ್ಥಳೀಯಾಡಳಿತ ಬಹಿರಂಗಪಡಿಸದೇ ಹೋದರೂ, ಘಟನೆಯ ವಿವರವನ್ನು ಬಹಿರಂಗಪಡಿಸಿದೆ. ದಂಪತಿ ಅರವತ್ತು ವರ್ಷ ಮೇಲ್ಪಟ್ಟವರಾಗಿದ್ದು, ಕರೊನಾ ವೈರಸ್ ಸೋಂಕು ತಗುಲದಂತೆ ತಡೆಯುವ ಸಲುವಾಗಿ ಅವರು ಕ್ಲೊರೊಕ್ವಿನ್ ಫೋಸ್ಪೇಟ್ ಅನ್ನು ಸೇವಿಸಿದ್ದರು. ಪತಿಯ ಜತೆಗೆ ಕ್ರಿಟಿಕಲ್ ಕೇರ್ ನಲ್ಲಿದ್ದ ಪತ್ನಿ ಕೂಡ ಅದನ್ನು ಸೇವಿಸಿದ್ದಾರೆ. ಕ್ಲೊರೊಕ್ವಿನ್ ಫೋಸ್ಫೇಟ್ ಅನ್ನು ಫಿಶ್ ಟ್ಯಾಂಕ್ ಕ್ಲೀನ್ ಮಾಡಲು ಬಳಸುತ್ತಾರೆ. ಇದು ವೈದ್ಯಕೀಯ ಬಳಕೆಯ ಕ್ಲೊರೊಕ್ವಿನ್ಗಿಂತ ಭಿನ್ನವಾದುದು.
ಕ್ಲೊರೊಕ್ವಿನ್ ಮತ್ತು ಅದೇ ಮಾದರಿಯ ಹೈಡ್ರಾಕ್ಸಿಕ್ಲೊರೊಕ್ವಿನ್ಗಳು ಆರಂಭಿಕ ಟೆಸ್ಟ್ಗಳಲ್ಲಿ ಕರೊನಾ ವೈರಸ್ ತಡೆಯುವ ಸಂಕೇತಗಳನ್ನು ತೋರಿದ್ದವು. ಹೀಗಾಗಿ ಮಲೇರಿಯಾ ನಿವಾರಣೆಯ ಔಷಧದ ಮೂಲಕ ನ್ಯೂ ಕರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಬಹುದು. ವಾಸಿಯ ಆಗತ್ತೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಆದರೆ ಇದಕ್ಕೆ ಸಂಬಂಧಿಸಿ ಯಾವುದೇ ಸಾಕ್ಷ್ಯಗಳಿಲ್ಲ. ಇವೆಲ್ಲವೂ ಪ್ರಾಥಮಿಕ ವರದಿಯ ಅಂಶಗಳು.
ಈ ಪ್ರಾಥಮಿಕ ಅಧ್ಯಯನ ವರದಿಗಳ ಕುರಿತು ಆಸಕ್ತಿ, ಕುತೂಹಲ ಕೆರಳುವುದಕ್ಕೆ ಕಾರಣವಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್. ಅದರಲ್ಲಿ ಹೈಡ್ರಾಕ್ಸಿಕ್ಲೊರೊಕ್ವಿನ್ ಮತ್ತು ಒಂದು ಆ್ಯಂಟಿ ಬಯಾಟಿಕ್ ಇದ್ದರೆ ಔಷಧ ಕ್ಷೇತ್ರದಲ್ಲಿ ಬಹುದೊಡ್ಡ ಗೇಮ್ ಚೇಂಜರ್ ಆಗಿ ಈ ಸಂಶೋಧನೆ ಬದಲಾಗಲಿದೆ. ಬಹುಶಃ ಇದು ತತ್ಕ್ಷಣವೇ ಬಳಕೆಗೂ ಸಿಗಲಿದೆ. ಈಗಾಗಲೆ ಫ್ರಾನ್ಸ್ ನಲ್ಲಿ ಆರು ರೋಗಿಗಳಿಗೆ ಈ ಔಷಧ ನೀಡಲಾಗಿದೆ ಎಂದು ಫ್ರೆಂಚ್ ಅಧ್ಯಯನ ವರದಿಯನ್ನು ಉಲ್ಲೇಖಿಸಿದ್ದರು.
ಎಪಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಫ್ರಾನ್ಸ್ನ ಡಾಕ್ಟರ್ಗಳು ಮತ್ತು ರಾಜಕಾರಣಿಗಳು ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆಯ ವಿಸ್ತರಣೆಯನ್ನು ಉತ್ತೇಜಿಸುತ್ತಿದ್ದಾರೆ. ಆದಾಗ್ಯೂ, ಸೈಂಟಿಸ್ಟ್ಗಳು ಇದನ್ನು ವಿರೋಧಿಸುತ್ತಿದ್ದು, ಈ ಬಗ್ಗೆ ವಿಸ್ತೃತ ಅಧ್ಯಯನ ಆಗಬೇಕಾದ ಅವಶ್ಯಕತೆ ಇದೆ. ಇದಲ್ಲದೇ ಅಂತಹ ಔಷಧ ಸೇವಿಸಿದರೆ ಅಪಾಯ ಹೆಚ್ಚು. ಕೆಲವರು ಅರೆಬರೆ ಮಾಹಿತಿ ಪಡೆದು ಈ ರೀತಿ ಫಿಶ್ ಟ್ಯಾಂಕ್ ಕ್ಲೀನ್ ಮಾಡುವ ರಾಸಾಯನಿಕಗಳನ್ನು ತಿಂದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ ಎಂದೂ ಎಚ್ಚರಿಸಿದ್ದಾರೆ. (ಏಜೆನ್ಸೀಸ್)