Ajnar River Cleanup: ಮಧ್ಯಪ್ರದೇಶದ ಅಜ್ನಾರ್ ನದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪರಿಸರ ಪ್ರೇಮಿ ಸುರೇಂದ್ರ ಸಿಂಗ್ ಚೌಧರಿ ಅಲಿಯಾಸ್ ಬಿಟ್ಟು ತಬಾಹಿ ಚರ್ಮದ ಸೋಂಕಿನಿಂದ ಬಳಲುತ್ತಿದ್ದಾನೆ. ಕಲುಷಿತ ನೀರಿನಲ್ಲಿದ್ದ ಕೊಳೆತ ತ್ಯಾಜ್ಯಗಳನ್ನು ತೆಗೆದ ಪರಿಣಾಮ ಕೈ-ಕಾಲುಗಳಲ್ಲಿ ನಿರಂತರ ತುರಿಕೆ, ಚರ್ಮ ಸುಲಿಯುವುದು ಹಾಗೂ ತೀವ್ರ ಮೈಕೈ ನೋವು ಕಾಣಿಸಿಕೊಂಡಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಟ್ಟು, ಕಲುಷಿತ ನೀರಿನಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರಿಂದ ತಮ್ಮ ದೇಹಕ್ಕೇನಾಗಿದೆ ಅನ್ನೋದನ್ನು ತೋರಿಸಿದ್ದಾರೆ. ಸೂಕ್ತ ವೈಜ್ಞಾನಿಕ ಭದ್ರತಾ ಪರಿಕರಗಳಿಲ್ಲದೆ ಹೀಗೆ ಕಲುಷಿತ ನದಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲು ಹೋದರೆ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ.
ರಬ್ಬರ್ ಗ್ಲೌಸ್ ಹಾಗೂ ಗಮ್ ಬೂಟ್ಗಳಂತಹ ಸಾಮಾನ್ಯ ವಸ್ತುಗಳನ್ನು ಬಳಸಿದರೂ ಇಂತಹ ಅಪಾಯಕಾರಿ ತ್ಯಾಜ್ಯಗಳಿಂದ ಸಂಪೂರ್ಣ ರಕ್ಷಣೆ ಸಿಗುವುದಿಲ್ಲ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ. ಬಿಟ್ಟು ತಬಾಹಿ ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಹಾಗೂ ಮುಂದೆ ಸ್ವಚ್ಛತಾ ಕಾರ್ಯಕ್ಕೆ ಇಳಿಯುವಾಗ ಉತ್ತಮ ಗುಣಮಟ್ಟದ ರಕ್ಷಣಾ ಕವಚಗಳನ್ನು ಬಳಸುವಂತೆ ನೆಟ್ಟಿಗರು ಸಲಹೆ ನೀಡಿದ್ದಾರೆ. ಇನ್ನೊಂದೆಡೆ, ತಮ್ಮ ಚರ್ಮದ ಸ್ಥಿತಿಯನ್ನು ತೋರಿಸುತ್ತಲೇ ನದಿಗಳಿಗೆ ಕಸ ಎಸೆಯುವುದನ್ನು ತಡೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಏನೆಲ್ಲಾ ಮಾಡಬಹುದು ಎಂದು ಬಿಟ್ಟು ಜನರಲ್ಲಿ ಅಭಿಪ್ರಾಯ ಕೇಳಿದ್ದಾನೆ.