ನ್ಯೂಸ್

ಫ್ರೆಂಡ್​ಶಿಪ್​ ನಿರಾಕರಿಸಿದ ಮಹಿಳೆಗೆ ಕೆಟ್ಟ ಹೆಸರು ತರಲು ಖತರ್ನಾಕ್​ ಐಡಿಯಾ ಮಾಡಿದ ಕಿರಾತಕ!

ಔರಂಗಬಾದ್​: ಮಹಿಳೆಯೊಬ್ಬಳು ಫ್ರೆಂಡ್​ಶಿಪ್ ನಿರಾಕರಿಸಿದ್ದಕ್ಕೆ ಕೋಪಗೊಂಡ 38 ವರ್ಷದ ವ್ಯಕ್ತಿಯೊಬ್ಬ ಆಕೆಯ ಚಾರಿತ್ರ್ಯ ಹರಣ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ.

ಆ ಮಹಿಳೆ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ ಪುರುಷರನ್ನು ಟಾರ್ಗೆಟ್​ ಮಾಡುವುದೇ ಆಕೆಯ ಕೆಲಸ ಎಂದು ಭಿತ್ತಿಪತ್ರಗಳನ್ನು ಹಂಚುವ ಮೂಲಕ ಮಹಿಳೆಯ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾನೆ.

ಘಟನೆಯ ವಿವರಣೆಗೆ ಬರುವುದಾದರೆ, ಸತಾರಾದಲ್ಲಿ ಬ್ಯೂಟಿ ಪಾರ್ಲರ್​ ಹೊಂದಿರುವ ಮಹಿಳೆಗೆ ಸೆ.15ರಂದು ಆರೋಪಿಯ ಪರಿಚಯ ಆಗುತ್ತದೆ. ಇದಾದ ಬಳಿಕ ಆತ ಮಹಿಳೆಗೆ ಪದೇಪದೆ ಕರೆ ಮಾಡುವುದು ಮತ್ತು ಮೆಸೇಜ್​ ಮಾಡಲು ಆರಂಭಿಸಿದ್ದಾನೆ. ಅಲ್ಲದೆ, ಬೇರೆ ಬೇರೆ ಹೋಟೆಲ್​ಗಳಲ್ಲಿ ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ, ಇದ್ಯಾವುದಕ್ಕೂ ಮಹಿಳೆ ಸೊಪ್ಪು ಹಾಕಲಿಲ್ಲ. ಇದರಿಂದ ಅಸಮಾಧಾನಗೊಂಡ ಆರೋಪಿ ಆಕೆಯ ಮಾನಹಾನಿಗೆ ನಿರ್ಧರಿಸಿದ.

ಕರಪತ್ರಗಳ ಮೂಲಕ ಚಾರಿತ್ಯ ಹರಣ ಮಾಡುವ ಕೆಟ್ಟ ಯೋಜನೆ ಹಾಕಿಕೊಂಡ ಆರೋಪಿ, ಆಕೆಯ ಚಾರಿತ್ರ್ಯ ಸರಿಯಿಲ್ಲ, ಆಕೆಯನ್ನು ಬಹಿಷ್ಕರಿಸಿ ಎಂದು ಬರೆದು ಸ್ಥಳೀಯವಾಗಿ ಹಂಚಿದ್ದಾನೆ. ಇದರಿಂದ ತೀವ್ರ ಪರಿಣಾಮ ಎದುರಿಸಿದ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಆರೋಪಿಯ ವರ್ತನೆಯಿಂದಾಗಿ ನನ್ನ ವ್ಯವಹಾರವೂ ಹಾಳಾಗಿ ಹೋಯಿತು ಎಂದಿದ್ದಾಳೆ.

ಈಗಾಗಲೇ ಕರೊನಾ ಲಾಕ್​ಡೌನ್​ನಿಂದ ನಷ್ಟದಲ್ಲಿದ್ದೇನೆ. ಇದೀಗ ಬಿಸಿನೆಸ್​ ಮತ್ತಷ್ಟು ಹಾಳಾಯಿತು ಎಂದು ದೂರಿನಲ್ಲಿ ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕಣ್ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)