ನ್ಯೂಸ್

ಆನ್​ಲೈನ್ ಮೂಲಕ ಖಾತೆಗೆ ಕನ್ನ: ಲಿಂಕ್ ಕ್ಲಿಕ್ ಮಾಡಲು ಹೇಳಿ 69 ಸಾವಿರ ರೂ. ಲಪಟಾಯಿಸಿದ ವಂಚಕ

ಬೆಂಗಳೂರು: ಆನ್​ಲೈನ್ ಮೂಲಕ ಮನೆಗೆ ಬೇಕಾದ ವಸ್ತು ಖರೀದಿಗೆ ಮುಂದಾದ ವ್ಯಕ್ತಿಗೆ ಅಪರಿಚಿತ ನಂಬರ್​ನಿಂದ ಕರೆ ಮಾಡಿದ ಸೈಬರ್ ಕಳ್ಳರು ಲಿಂಕ್ ಕ್ಲಿಕ್ ಮಾಡುವಂತೆ ತಿಳಿಸಿ ಖಾತೆಯಲ್ಲಿದ್ದ 69,998 ರೂ. ಲಪಟಾಯಿಸಿದ್ದಾರೆ.

ಚನ್ನಸಂದ್ರದ ಚೇತನ್ (38) ಹಣ ಕಳೆದುಕೊಂಡವರು. ಚೇತನ್ ಆನ್​ಲೈನ್​ನಲ್ಲಿ ಮೆಟೀರಿಯಲ್ ಬುಕ್ ಮಾಡಿದ್ದರು. ತಾವು ಬುಕ್ ಮಾಡಿದ ಆನ್​ಲೈನ್ ಕಂಪನಿಯ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿ ವಿಚಾರಿಸಿದ್ದರು. ಕೆಲ ಹೊತ್ತಿನ ಬಳಿಕ ಚೇತನ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಕೆಲ ವಾಕ್ಯಗಳನ್ನು ಟೈಪ್ ಮಾಡಿ ನಮ್ಮ ನಂಬರ್​ಗೆ ಕಳಿಸಿ ಎಂದು ಲಿಂಕ್ ಕಳುಹಿಸಿದ್ದ. ನಂತರ,

ನಿಮ್ಮ ಹೆಸರಿನಲ್ಲಿ ಪೇಟಿಎಂ ಖಾತೆ ತೆರೆಯಬೇಕು. ಅದಕ್ಕೆ ನೀವು 10 ರೂ. ಹಾಕಬೇಕು ಎಂದು ತಿಳಿಸಿದ್ದ. ಅಪರಿಚಿತ ಕಳುಹಿಸಿದ್ದ ಲಿಂಕ್ ಅನ್ನು ಚೇತನ್ ಕ್ಲಿಕ್ ಮಾಡಿದ್ದರು. ಆಗ ಮೊಬೈಲ್​ಗೆ ಬಂದ ಯುಪಿಐ ನಂಬರ್ ಹೇಳುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದ. ಆದರೆ, ಅದಕ್ಕೆ ಚೇತನ್ ಒಪ್ಪಿರಲಿಲ್ಲ. ಲಿಂಕ್ ಕ್ಲಿಕ್ ಮಾಡಿದ ಸ್ವಲ್ಪ ಸಮಯದ ಬಳಿಕ ಚೇತನ್ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಪಶ್ಚಿಮ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟಿಪಿ ನಂಬರ್ ಪಡೆದು ಖಾತೆಗೆ ಕನ್ನ

ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಸುಂಕದಕಟ್ಟೆಯ ನಿವಾಸಿ ಗಂಗಲಕ್ಷ್ಮಮ್ಮ (45) ಎಂಬುವರಿಗೆ ಕರೆ ಮಾಡಿದ ಅಪರಿಚಿತರು, ನಿಮ್ಮ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದ್ದು, ಅದನ್ನು ಅಪ್​ಡೇಟ್ ಮಾಡಬೇಕು ಎಂದು ತಿಳಿಸಿದ್ದರು. ಬ್ಯಾಂಕ್ ಮ್ಯಾನೇಜರ್ ಇರಬಹುದು ಎಂದು ನಂಬಿದ ಗಂಗಲಕ್ಷ್ಮಮ್ಮ, ಮೊಬೈಲ್​ಗೆ ಬಂದ ಒಟಿಪಿ ಹಾಗೂ ಸಿವಿವಿ ನಂಬರ್​ನ್ನು ಕರೆ ಮಾಡಿದ ವ್ಯಕ್ತಿಗಳಿಗೆ ಹೇಳಿದ್ದರು. ಇದಾದ ಬಳಿಕ ಹಂತ-ಹಂತವಾಗಿ ಗಂಗಲಕ್ಷ್ಮಮ್ಮ ಅವರ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ. ಕಡಿತವಾಗಿದೆ ಎಂದು ಪಶ್ಚಿಮ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.