ನ್ಯೂಸ್

ಮುಂಬೈನಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ 'ರೀಲ್ಸ್​' ಸ್ಟಾರ್​ ಅಂದರ್!

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಬಂದು ಕಳ್ಳತನ ಮಾಡುತ್ತಿದ್ದ ರೀಲ್ಸ್​ ಸ್ಟಾರ್​​ನನ್ನು ಬಂಧಿಸುವಲ್ಲಿ ಅಮೃತಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸಲೀಂ ರಫೀಕ್ ಅಲಿಯಾಸ್ ಬಾಂಬೆ ಸಲೀಂ ಮತ್ತು ಆತನ ಸಹಚರ ಯಾಸೀನ್ ಮಕ್ಬೂಲ್ ಬಂಧಿತರು.

ಕುಖ್ಯಾತ ಬಂಧಿತ ಆರೋಪಿಗಳಿಬ್ಬರು ಕಳ್ಳತನ ಮಾಡಲೆಂದೇ ಮುಂಬೈನಿಂದ ಬಂದು ಸೈಲೆಂಟ್ ಆಗಿ ಕೃತ್ಯ ಎಸಗಿ ವಾಪಾಸಾಗುತ್ತಿದ್ದರು. ಸದ್ಯ ಬಂಧಿತರಿಂದ 1 ಕೆ.ಜಿ ಚಿನ್ನ ಹಾಗೂ 6.5 ಕೆ.ಜಿ ಬೆಳ್ಳಿ ಸಹಿತ 67 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಸಲೀಂ ರಫೀಕ್ ಸಮಾಜದ ಕಣ್ಣಿಗೆ ಸೋಶಿಯಲ್ ಸೆಲೆಬ್ರಿಟಿಗಳಂತೆ ಫೋಸ್ ಕೊಡುತ್ತಿದ್ದ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಸಾಕಷ್ಟು ಫಾಲೋವರ್ಸ್ ಹೊಂದಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡು ತಾನೊಬ್ಬ ಸೋಶಿಯಲ್ ಮಿಡಿಯಾ ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದ. ಪ್ರಮುಖ ಆರೋಪಿ ಬಾಂಬೆ ಸಲೀಂ ಕೆಲವು ಕಡೆ ತಾನೇ ಕಳ್ಳತನಕ್ಕಿಳಿದರೆ, ಇನ್ನೂ ಕೆಲವೆಡೆ ಸಹಚರರ ಮೂಲಕ ಕೃತ್ಯ ಮಾಡಿಸುತ್ತಿದ್ದ.

ಆರೋಪಿಗಳು ಮುಂಬೈನಿಂದ ಬಂದು ಮೊದಲು ಬೆಂಗಳೂರಿನ ಬೀದಿ ಸುತ್ತಾಡುತ್ತಿದ್ದರು. ಯಾವ ಯಾವ ಏರಿಯಾಗಳಲ್ಲಿ ಯಾರ್ಯಾರು ಇದ್ದಾರೆ? ಯಾವ ಮನೆಯ ಲೈಟ್ ಸಂಜೆ ಎಷ್ಟು ಹೊತ್ತಿಗೆ ಆನ್ ಆಗುತ್ತದೆ? ಎಷ್ಟು ಗಂಟೆಗೆ ಆಫ್ ಆಗುತ್ತದೆ? ಯಾವ ಮನೆಯಲ್ಲಿ ಲೈಟ್ ಆಫ್ ಇದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬಳಿಕ ಕಳ್ಳತನ ಮಾಡಿ ಮುಂಬೈಗೆ ಮರಳುತ್ತಿದ್ದರು.

ಪ್ರಮುಖ ಆರೋಪಿ ಬಾಂಬೆ ಸಲೀಂ ಈ ಹಿಂದೆ ಬಸವನಗುಡಿ ಪೊಲೀರಿಂದ ಬಂಧನವಾಗಿದ್ದ. ಕೆಲ ಸಮಯ ಸೆರೆವಾಸ ಅನುಭವಿಸಿದ್ದ. ಇದೀಗ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದು, ಅಮೃತಹಳ್ಳಿ ಠಾಣೆಯ 4, ಕೊಡಿಗೆಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳ ಹತ್ತು ಪ್ರಕರಣಗಳು ಬಯಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.