ನ್ಯೂಸ್

ವಾಮಾಚಾರ ಕಲಿಯುತ್ತಿದ್ದ ಎಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು!

ಮಧ್ಯಪ್ರದೇಶ: ಮಾಟಮಂತ್ರ ಮಾಡುವುದನ್ನು ಕಲಿಯುತ್ತಿದ್ದ ಎಂದು ಶಂಕಿಸಿ, ವ್ಯಕ್ತಿಯೊಬ್ಬನಿಗೆ ಚಪ್ಪಲಿ ಹಾರವನ್ನು ಹಾಕಿ, ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಗುಂಪು ಕಟ್ಟಿಕೊಂಡ ಮಹಿಳೆಯರು ವ್ಯಕ್ತಿಗೆ ಮನಬಂದಂತೆ ಹೊಡೆದ ಘಟನೆ ಮಧ್ಯಪ್ರದೇಶದ ಛಿಂದ್‌ವಾರದಲ್ಲಿ ವರದಿಯಾಗಿದೆ.

ವರದಿಗಳ ಪ್ರಕಾರ, ವ್ಯಕ್ತಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದಾನೆ ಎಂಬ ಶಂಕೆಯಲ್ಲಿ ಆತನಿಗೆ ಗ್ರಾಮಸ್ಥರು ಈ ರೀತಿ ಶಿಕ್ಷೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ವೈರಲ್ ಆದ ಬೆನ್ನಲ್ಲೇ ಘಟನೆಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಘಟನೆಯಲ್ಲಿ ಮಹಿಳೆಯೊಬ್ಬರು ವ್ಯಕ್ತಿಯನ್ನು ಸ್ಕಾರ್ಫ್‌ನಿಂದ ಎಳೆದಾಡಿದ್ದಲ್ಲದೇ, ಆತನಿಗೆ ಗುಂಪುಗಟ್ಟಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರೊಟ್ಟಿಗೆ ಪಾದರಕ್ಷೆಯಿಂದ ಮಾಡಿದ ಹಾರವನ್ನು ವ್ಯಕ್ತಿಯ ಕೊರಳಿಗೆ ಹಾಕಿ ಹೊಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಹಿರಿಯ ಅಧಿಕಾರಿಗಳು ವಿಡಿಯೋವನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).