ನ್ಯೂಸ್

ಚಿನ್ನದ ಸರ ಕಿತ್ತು ಪರಾರಿಯಾಗಲೆತ್ನಿಸಿದವನ ಮೇಲೆ ಹಲ್ಲೆ

ಸಿದ್ದಾಪುರ: ನೀರು ಕೇಳುವ ನೆಪದಲ್ಲಿ ಮನೆ ನುಗ್ಗಿ ಅತ್ತೆ ಮತ್ತು ಸೊಸೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದವನ ಮೇಲೆ ಹಲ್ಲೆ ನಡೆಸಲಾಗಿದೆ.

ಪಾಲಿಬೆಟ್ಟ ನಿವಾಸಿ ಮುನಾವರ್ (26) ಎಂಬಾತನ ಮೇಲೆ ಸಿದ್ದಾಪುರ ಸಮೀಪದ ಕೊಂಡಂಗೇರಿ ಪರಂಬು ಗ್ರಾಮದಲ್ಲಿ ಸೋಮವಾರ ಹಲ್ಲೆ ನಡೆಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಹಾಗೂ ಇಬ್ಬರು ಮಹಿಳೆಯರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಂಡಂಗೇರಿ ಗ್ರಾಮದಲ್ಲಿ ಸೊಸೆ ಸಫನಾ (22) ಮತ್ತು ಅತ್ತೆ ಸಾರಮ್ಮ (60) ಇಬ್ಬರೇ ಮನೆಯಲ್ಲಿದ್ದರು. ಈ ವೇಳೆ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮುನಾವರ್ ಕತ್ತಿಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಸದ್ಯ, ಮೂವರನ್ನೂ ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.