ಶ್ರೀನಗರ : ಮಧ್ಯ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಕಂಗನ್‌ನ ಗೊಂಚಿ ಮೊಹಲ್ಲಾ ಅಖಾಲ್ ನಿವಾಸಿ ಅಬ್ದುಲ್ ಮಜೀದ್ ಖಾನ್ ನ ಪತ್ನಿ ರುಬೀನಾ ಎಂದು ಗುರುತಿಸಲಾಗಿದ್ದು. ಜುಲೈ 14 ರಂದು ಸಿಂಧ್ ನಾಲೆಯಿಂದ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮನೆಯಲ್ಲಿ ಆಕೆಯ ಪತಿಯೇ ಆಕೆಯನ್ನು ಕೊಲೆಗೈದು ನಂತರ ಸಹೋದರನ ಸಹಾಯದಿಂದ ಶವವನ್ನು ನಾಲೆಗೆ ಎಸೆದಿರುವುದಾಗಿ ತನಿಖೆಯಿಂದ ತಿಳಿದುಬಂದಿದ್ದು, ಆತನನ್ನು ಹಾಗೂ ಆತನ ಸಹೋದರನನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಂಡ ಹೆಂಡತಿ ನಡುವಿನ ಕಲಹವೇ ಈ ಕೊಲೆಗೆ ಕಾರಣವಾಗಿದೆ ಎಂದು ಗಂಡರ್‌ಬಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಪೋಸ್ವಾಲ್ ತಿಳಿಸಿದ್ದಾರೆ.
ಕಂಗನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.