ಮ್ಯಾಡ್ರಿಡ್: ಬೀದಿ ಬೀದಿಯಲ್ಲಿ ಬೆತ್ತಲೆ ಓಡಾಡಿದರೆ ಜನರಿಂದ ಧರ್ಮದೇಟು ಬೀಳುವುದು ಖಚಿತ ಅಥವಾ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ನ್ಯಾಯಾಲಯವೇ ಬೆತ್ತಲೆಯಾಗಿ ಓಡಾಡಲು ಅನುಮತಿಯನ್ನು ನೀಡಿದೆ. ಇದು ನಿಜಾನಾ ಎಂಬ ಪ್ರಶ್ನೆ ಮೂಡಬಹುದು. ಆದರೆ, ಮುಂದೆ ಓದಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ.
ಅಂದಹಾಗೆ ಇಂಥದ್ದೊಂದು ಆದೇಶ ನೀಡಿರುವುದು ಸ್ಪೇನ್ನ ನ್ಯಾಯಾಲಯ. ಸ್ಪೇನ್ನ ವಾಲೆನ್ಸಿಯಾ ಪಟ್ಟಣದ ಬೀದಿ ಬೀದಿಯಲ್ಲಿ ಬೆತ್ತಲೆಯಾಗಿ ಓಡಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ದಂಡ ವಿಧಿಸಲಾಗಿತ್ತು. ದಂಡವನ್ನು ರದ್ದುಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ವಾಲೆನ್ಸಿಯಾ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಮೇಲ್ಮನವಿಯನ್ನು ತಿರಸ್ಕರಿಸಿ, ಅಧೀನ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ವ್ಯಾಲೆನ್ಸಿಯಾ ಪಟ್ಟಣದ ಅಲ್ದಾಯಾ ಬೀದಿಗಳಲ್ಲಿ 29 ವರ್ಷದ ಅಲೆಜಾಂಡ್ರೊ ಕೊಲೊಮರ್ ಎಂಬಾತ ಬೆತ್ತಲೆಯಾಗಿ ತಿರುಗಾಡುತ್ತಿದ್ದಾನೆ. ಈತನ ಮೇಲಿನ ದಂಡ ಪ್ರಕರಣವನ್ನು ರದ್ದುಗೊಳಿಸಿರುವ ಕೋರ್ಟ್, ಸಾರ್ವಜನಿಕ ನಗ್ನತೆಗೆ ಸಂಬಂಧಿಸಿದ ಅಥವಾ ಅದರ ವಿರೋಧಕ್ಕೆ ಅನ್ವಯವಾಗುವಂತಹ ಯಾವುದೇ ಕಾನೂನು ಇಲ್ಲ ಎಂದು ಕೋರ್ಟ್ ಹೇಳಿದೆ. 1988ರಿಂದ ಸ್ಪೇನ್‌ನಲ್ಲಿ ಸಾರ್ವಜನಿಕ ನಗ್ನತೆ ಕಾನೂನುಬದ್ಧವಾಗಿದೆಯಂತೆ.
ವಿಚಾರಣೆಗೆ ಹಾಜರಾಗುವಾಗಲೂ ಕೇವಲ ಒಂದು ಜೊತೆ ಬೂಟ್ಸ್ ಬಿಟ್ಟರೆ ಬೆತ್ತಲೆಯಾಗಿಯೇ ಅಲೆಜಾಂಡ್ರೊ ಕೊಲೊಮರ್ ನ್ಯಾಯಲಯದ ಆವರಣಕ್ಕೆ ಎಂಟ್ರಿಯಾದ. ಆದರೆ, ಪೂರ್ತಿ ಬಟ್ಟೆ ಧರಿಸದೇ ಕೋರ್ಟ್ ಕಟ್ಟಡದ ಒಳಗೆ ಪ್ರವೇಶಿಸಿದಂತೆ ಆದೇಶಿಸಿದ ಬಳಿಕ ಆತನ ವಿಚಾರಣೆಗೆ ಅವಕಾಶ ನೀಡಲಾಯಿತು. ವಿಚಾರಣೆ ವೇಳೆ ನನ್ನ ಮೇಲಿನ ದಂಡವು ಸೈದ್ಧಾಂತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಲೆಜಾಂಡ್ರೊ ಕೊಲೊಮರ್, 2020ರಿಂದ ಬೆತ್ತಲೆಯಾಗಿ ಓಡಾಡಲು ಶುರು ಮಾಡಿದೆ. ಅಂದಿನಿಂದ ಅವಮಾನಕ್ಕಿಂತಲೂ ಹೆಚ್ಚು ಬೆಂಬಲವನ್ನೇ ನಾನು ಸ್ವೀಕರಿಸಿದ್ದೇನೆ. ಆದರೆ, ಒಮ್ಮೆ ಮಾತ್ರ ಚಾಕುವಿನಿಂದ ಬೆದರಿಕೆಯನ್ನು ಅನುಭವಿಸಿದೆ. ದಂಡ ವಿಧಿಸುವುದಕ್ಕೆ ಯಾವುದೇ ಅರ್ಥವಿಲ್ಲ. ನನ್ನ ಮೇಲೆ ಅಶ್ಲೀಲ ಪ್ರದರ್ಶನದ ಆರೋಪ ಮಾಡಲಾಗಿದೆ. ಆದರೆ, ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಂಬುತ್ತಾನೆ ಎಂದು ಹೇಳಿದನು.
ಸ್ಪೇನ್‌ನಲ್ಲಿ ಬೀದಿಯಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ಓಡಾಡಬಹುದು. ಅವರನ್ನು ಯಾರು ಕೂಡ ಬಂಧಿಸುವುದಿಲ್ಲ. ಆದರೆ, ವಲ್ಲಡೊಲಿಡ್ ಮತ್ತು ಬಾರ್ಸಿಲೋನಾದಲ್ಲಿ ನಗ್ನತೆಯನ್ನು ನಿಯಂತ್ರಿಸಲು ತಮ್ಮದೇಯಾದ ಕಾನೂನನ್ನು ಜಾರಿಗೆ ತಂದಿವೆ. ಅಲ್ಡಾಯಾದಲ್ಲಿ ನಗ್ನತೆಯನ್ನು ನಿಷೇಧಿಸುವ ಯಾವುದೇ ಕಾನೂನನ್ನು ಹೊಂದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅಲ್ಡಯಾದ ಎರಡು ಬೀದಿಗಳಲ್ಲಿ ಬೇರೆ ಬೇರೆ ಸಮಯಗಳಲ್ಲಿ ಬೆತ್ತಲೆಯಾಗಿ ಓಡಾಡಲು ಅಲೆಜಾಂಡ್ರೋ ತನ್ನನ್ನು ಸೀಮಿತಗೊಳಿಸಿಕೊಂಡಿದ್ದಾನೆ ಮತ್ತು ಅವರ ನಡವಳಿಕೆಯು ನಾಗರಿಕ ಭದ್ರತೆ, ಶಾಂತಿ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಇದೀಗ ವೇಲೆನ್ಸಿಯಾ ಹೈಕೋರ್ಟ್ ನೀಡಿರುವ ತೀರ್ಪು ಸಾರ್ವಜನಿಕ ನಗ್ನತೆಗೆ ಸಂಬಂಧಿಸಿದಂತೆ ಸ್ಪೇನ್‌ನಲ್ಲಿ ಸ್ಪಷ್ಟವಾದ ಕಾನೂನು ಚೌಕಟ್ಟಿನ ಅಗತ್ಯವನ್ನು ಎತ್ತಿ ತೋರಿಸುತ್ತದೆ. (ಏಜೆನ್ಸೀಸ್)