ಲಖನೌ: ಸ್ಕೂಟರ್ಗೆ ಡಿಕ್ಕಿ ಹೊಡೆದ ಟ್ರಕ್ ಒಂದು ಸುಮಾರು 1 ಕಿ.ಮೀ ದೂರ ಎಳೆದೊಯ್ದ ಪರಿಣಾಮ ತಾತ ಮತ್ತು ಮೊಮ್ಮಗ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಾನ್ಪುರ್-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ತಾತ ಸ್ಥಳದಲ್ಲೇ ಸತ್ತರೆ, 6 ವರ್ಷದ ಮೊಮ್ಮಗನನ್ನು ಸ್ಕೂಟರ್ ಸಮೇತ ಸುಮಾರು 1 ಕಿ.ಮೀ ದೂರ ಟ್ರಕ್ ಎಳೆದೊಯ್ದಿದೆ. ದಾರಿಹೋಕರು ಸಾಕಷ್ಟು ಮನವಿ ಮಾಡಿದರೂ ವಾಹನ ನಿಲ್ಲಿಸದ ಟ್ರಕ್ ಚಾಲಕ ಉದ್ಧಟತನ ಪ್ರದರ್ಶಿಸಿದ್ದಾನೆ. ಕೋಪಗೊಂಡ ಗ್ರಾಮಸ್ಥರು ಕಲ್ಲು ತೆಗೆದು ಟ್ರಕ್ನತ್ತ ಬೀಸಿದರೂ ನಿಲ್ಲಿಸಲಿಲ್ಲ. ಕೊನೆಗೂ ಹೇಗೋ ಟ್ರಕ್ ಅನ್ನು ತೆಡೆದು ನಿಲ್ಲಿಸಲಾಯಿತು.
ಇದನ್ನೂ ಓದಿ: ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್
ಇದೇ ಸಂದರ್ಭದಲ್ಲಿ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದರು ಮತ್ತು ಟ್ರಕ್ ಚಾಲಕನನ್ನು ಬಂಧಿಸಿದರು.
ಮೃತರನ್ನು ತಾತ ಉದಿತ್ ನಾರಾಯಣ್ ಛಾನ್ಸುರಿಯಾ ಮತ್ತು ಅವರ ಮೊಮ್ಮಗ ಸಾತ್ವಿಕ್ ಎಂದು ಗುರುತಿಸಲಾಗಿದೆ. ತಾತ ಮತ್ತು ಮೊಮ್ಮಗ ಮಾರುಕಟ್ಟೆಗೆ ಹೋಗಿವಾಗ ದುರ್ಘಟನೆ ಸಂಭವಿಸಿದೆ. ಚಾಲಕನನ್ನು ಬಂಧಿಸಲಾಗಿದೆ ಎಂದು ಮೊಹೋಬಾ ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್)