ರಿಷಬ್ ಶೆಟ್ಟಿ ನಟನೆಯ ಜೈ ಹನುಮಾನ್ ಸಿನಿಮಾದಲ್ಲಿ ನಟಿಸಲಿರುವ ಮಮಿತಾ ಬೈಜು? 
ನ್ಯೂಸ್

ರಿಷಬ್ ಶೆಟ್ಟಿ ಜತೆ ಮಮಿತಾ ಬೈಜು ನಟನೆ; ‘ಜೈ ಹನುಮಾನ್’ಗೆ ಮಲಯಾಳಂ ಬೆಡಗಿ ಎಂಟ್ರಿ? | Mamitha Baiju in Jai Hanuman

ರಿಷಬ್ ಶೆಟ್ಟಿ ಅಭಿನಯದ ‘ಜೈ ಹನುಮಾನ್’ ಸಿನಿಮಾದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅವರ ಪಾತ್ರದ ಚಿತ್ರೀಕರಣವೂ ಆರಂಭವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಚಿತ್ರತಂಡದ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Jai Hanuman Movie: ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜೈ ಹನುಮಾನ್' ಈಗ ಮತ್ತೆ ಸುದ್ದಿಯಲ್ಲಿದೆ. ಮಲಯಾಳಂ ನಟಿ ಮಮಿತಾ ಬೈಜು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, ರಿಷಬ್ ಶೆಟ್ಟಿಗೆ ಜತೆಯಾಗಿ ಮಮಿತಾ ಕಾಣಿಸಿಕೊಳ್ಳಲಿದ್ದು, ಅವರ ಪಾತ್ರದ ಚಿತ್ರೀಕರಣವೂ ಆರಂಭವಾಗಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನಟಿ ಅಥವಾ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮಮಿತಾ ಬೈಜು ಈಗಾಗಲೇ ಮಲಯಾಳಂ ಮಾತ್ರವಲ್ಲದೆ, ಬೇರೆ ಭಾಷೆಗಳ ಸಿನಿಮಾಗಳಲ್ಲೂ ಗಮನ ಸೆಳೆಯುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ 'ಜನ ನಾಯಗನ್' ಹಾಗೂ ಸೂರ್ಯ ನಟನೆಯ 'ವಿಶ್ವನಾಥನ್ & ಸನ್ಸ್' ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಒಟಿಟಿಯಲ್ಲಿ ಗಮನ ಸೆಳೆದ ನಿವಿನ್ ಪೌಲಿ ನಟನೆಯ 'ಬೆಣ್ಣೆಹೆಮ್ ಕುಟುಂಬ ಯುನಿಟ್' ಸಿನಿಮಾದಲ್ಲೂ ಮಮಿತಾ ನಟಿಸಿದ್ದಾರೆ.

'ಹನುಮಾನ್' ಚಿತ್ರದ ಮುಂದುವರಿದ ಭಾಗ 'ಜೈ ಹನುಮಾನ್'

2024ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದ್ದ 'ಹನುಮಾನ್' ಸಿನಿಮಾದ ಮುಂದುವರಿದ ಭಾಗವೇ 'ಜೈ ಹನುಮಾನ್'. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಬ್ ಶೆಟ್ಟಿ ಫಿಲ್ಮ್ಸ್ ಕೂಡ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದೆ ಎಂದು ವರದಿಯಾಗಿದೆ.

ಇದು ಕನ್ನಡ ಸಿನಿಮಾ

ಈ ಹಿಂದೆ 'ಜೈ ಹನುಮಾನ್' ಸಿನಿಮಾ ಬಗ್ಗೆ ನೀಡಿದ್ದ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ತಮ್ಮ ಕನ್ನಡದ ನಂಟಿನ ಬಗ್ಗೆ ಮಾತನಾಡಿದ್ದರು. ‘ನಿರ್ದೇಶಕರು ಹಾಗೂ ನಿರ್ಮಾಪಕರು ತೆಲುಗಿನವರು. ಆದರೆ ನಾಯಕನಾದ ನಾನು ಕನ್ನಡದವನು. ನಾನು ಮತ್ತು ಹನುಮಂತ ಇಬ್ಬರೂ ಕನ್ನಡದವರು. ಹೀಗಾಗಿ ಇದು ಕನ್ನಡ ಸಿನಿಮಾ’ ಎಂದು ಹೇಳಿದ್ದರು.

ಸಿನಿಮಾಗೆ ಭಾಷೆಯ ಗಡಿಯಿಲ್ಲ ಎಂದಿದ್ದ ರಿಷಬ್

'ಜೈ ಹನುಮಾನ್'ನಲ್ಲಿ ವಿವಿಧ ಭಾಷೆಗಳ ಕಲಾವಿದರು ನಟಿಸುತ್ತಿದ್ದಾರೆ ಎಂದು ರಿಷಬ್ ಹೇಳಿದ್ದರು. “ಕನ್ನಡದವರು ಕನ್ನಡದಲ್ಲಿ, ಹಿಂದಿಯವರು ಹಿಂದಿಯಲ್ಲಿ, ತೆಲುಗಿನವರು ತೆಲುಗಿನಲ್ಲಿ ಮಾತನಾಡುತ್ತಾರೆ. ನಂತರ ಡಬ್ ಆಗಲಿದೆ. ಸಿನಿಮಾಗೆ ಭಾಷೆಯ ಗಡಿ ಇಲ್ಲ. ಜನರು ತಮಗೆ ಇಷ್ಟವಾಗುವುದನ್ನು ನೋಡುತ್ತಾರೆ” ಎಂದೂ ತಿಳಿಸಿದ್ದರು.

ಮಮಿತಾ ಬೈಜು ನಟಿಸಲಿದ್ದಾರಾ ಎಂಬ ಕುತೂಹಲ

ಒಟ್ಟಿನಲ್ಲಿ, 'ಜೈ ಹನುಮಾನ್'ನಲ್ಲಿ ಮಮಿತಾ ಬೈಜು ನಟಿಸಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅವರ ಪಾತ್ರ ಮತ್ತು ಸಿನಿಮಾದಲ್ಲಿನ ನಂಟಿನ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲಿದೆ.