ಶಿವಮೊಗ್ಗದಲ್ಲಿರುವ ಮ್ಯಾಮ್ಕೋಸ್ ಕೇಂದ್ರ ಕಚೇರಿ  
ನ್ಯೂಸ್

ಮ್ಯಾಮ್ಕೋಸ್ ಫಲಿತಾಂಶ ಅಧಿಕೃತವಾಗಿ ಪ್ರಕಟ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ) ಆಡಳಿತ ಮಂಡಳಿಯ ಚುನಾವಣೆಯ ಫಲಿತಾಂಶವನ್ನು ಇದೀಗ ಹೈಕೋರ್ಟ್ ಅಂತಿಮ ಆದೇಶದ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಸಹಕಾರ ಭಾರತಿಯ ಎಲ್ಲ 19 ಮಂದಿ ಆಯ್ಕೆಯನ್ನು ಹೈಕೋರ್ಟ್ ಅನುಮೋದಿಸಿದೆ.

ಫೆ.4ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆದು 5ರಂದು ಮತ ಎಣಿಕೆ ಪೂರ್ಣಗೊಂಡಿತ್ತು. ಸಹಕಾರ ಭಾರತಿಯ ಎಲ್ಲರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅನರ್ಹ ಮತದಾರರ ಪಟ್ಟಿಯಲ್ಲಿ 6,644 ಮತದಾರರಿಗೆ ಪ್ರತ್ಯೇಕ ಮತಗಟ್ಟೆ ತೆರೆದು, ಅವರ ಮತಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡುವಂತೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಹೀಗಾಗಿ ಮತ ಎಣಿಕೆ ಮುಗಿದರೂ ಅಧಿಕೃತವಾಗಿ ಫಲಿತಾಂಶ ಘೋಷಣೆ ಸಾಧ್ಯವಾಗಿರಲಿಲ್ಲ.

ಇದೀಗ ಹೈಕೋರ್ಟ್‌ನ ಆದೇಶ ಪ್ರತಿ ಕೈಸೇರಿರುವುದರಿಂದ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರವಿಚಂದ್ರ ನಾಯಕ ಫಲಿತಾಂಶ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಈ ಬಾರಿಯ ಮ್ಯಾಮ್ಕೋಸ್ ಚುನಾವಣೆಯ ಗೊಂದಲಗಳೆಲ್ಲ ದೂರಾದಂತಾಗಿದೆ.

ಉಪಾಧ್ಯಕ್ಷರ ಆಯ್ಕೆ: ಮ್ಯಾಮ್ಕೋಸ್ ಮುಂದಿನ ಉಪಾಧ್ಯಕ್ಷರು ಯಾರು ಎಂಬುದು ಮಾ.7ಕ್ಕೆ ತೀರ್ಮಾನವಾಗಲಿದೆ. ಸಹಕಾರ ಭಾರತಿಗೆ ಸಂಪೂರ್ಣ ಬಹುಮತ ಇರುವುದರಿಂದ ಯಾರಾದರೂ ಒಬ್ಬರು ಅವಿರೋಧವಾಗಿ ಆಯ್ಕೆಯಾಗುವ ಸಂಭವವೇ ಹೆಚ್ಚು. ಇದುವರೆಗೂ ಮ್ಯಾಮ್ಕೋಸ್‌ನಲ್ಲಿ ಸಹಕಾರ ಭಾರತಿಯಿಂದ ಅವಿರೋಧ ಆಯ್ಕೆ ನಡೆದಿದೆ. ಈಗಲೂ ಅದೇ ಪರಂಪರೆ ಮುಂದಿವರಿಯುವ ಸಾಧ್ಯತೆಗಳಿವೆ. ಹಾಲಿ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಅವರಿಗೆ ಮತ್ತೊಂದು ಅವಕಾಶ ದೊರೆತರೂ ಆಶ್ಚರ್ಯವಿಲ್ಲ. ಇವರೊಂದಿಗೆ ಹಿರಿಯ ನಿರ್ದೇಶಕರಾದ ಬಿ.ಸಿ.ನರೇಂದ್ರ ಹಾಗೂ ಎ.ಸುರೇಶ್ಚಂದ್ರ ಕೂಡಾ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಮ್ಯಾಮ್ಕೋಸ್‌ನ ಮುಂದಿನ ಸಾರಥಿ ಯಾರು? ಎಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.