ನ್ಯೂಸ್

ಆರ್‌ಜಿ ಕರ್ ಸಂತ್ರಸ್ತೆ ಪಾಲಕರಿಗೆ ಹಣ ನೀಡಿದ ಆರೋಪ: ಪುರಾವೆ ತೋರಿಸಿ ಎಂದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಆರ್‌ಜಿ ಕರ್ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಘೋರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಪಾಲಕರಿಗೆ ರಾಜ್ಯ ಸರ್ಕಾರ ಹಣದ ಆಮಿಷ ನೀಡಲಾಗಿತ್ತು ಎಂಬ ಆರೋಪವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ(ಸೆ.9) ತಳ್ಳಿಹಾಕಿದ್ದಾರೆ.

ಭೀಕರ ದುರಂತ ಸಂಭವಿಸಿದ ಒಂದೆರಡು ದಿನಗಳ ನಂತರ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಅವರು ತಮ್ಮೊಂದಿಗೆ ಹಣದ ಬಗ್ಗೆ ಮಾತನಾಡಿದ್ದಾರೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದರು.

ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹಣ ಕೊಡುವುದರ ಬಗ್ಗೆ ಏನನ್ನೂ ಹೇಳಲಿಲ್ಲ. ಹಣದ ಬಗ್ಗೆ ಮಾತನಾಡಿರುವ ಪುರಾವೆ ಇದ್ದರೆ ದಯವಿಟ್ಟು ನನಗೆ ತೋರಿಸಿ. ಇವೆಲ್ಲವೂ ಸುಳ್ಳು ಆರೋಪಗಳು. ಪಿತೂರಿ, ಅಸತ್ಯ, ಅಪಪ್ರಚಾರ ಮಾಡುವುದನ್ನು ಕೆಲವರು ಮುಂದುವರಿಸಿದ್ದಾರೆ ಎಂದು ಹೇಳಿದರು.

ಸಂತ್ರಸ್ತೆಯ ಪಾಲಕರನ್ನು ಭೇಟಿಯಾಗಲು ಹೋಗುವ ಮೊದಲು ಕೆಲವು ವೈದ್ಯರ ಸಂಘಗಳು ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದವು. ಆದರೆ ಹಣವು ಸಾವಿಗೆ ಎಂದಿಗೂ ಪರ್ಯಾಯವಾಗಿರುವುದಿಲ್ಲ ಎಂದು ನಾನು ಸಂತ್ರಸ್ತೆಯ ಪಾಲಕರಿಗೆ ಹೇಳಿದೆ. ನಾನು ಅವರಂತೆಯೇ ಆಘಾತಕ್ಕೊಳಗಾಗಿದ್ದೇನೆ ಎಂದು ನಾನು ಅವರಿಗೆ ತಿಳಿಸಿದೆ ಎಂದು ಹೇಳಿದರು.

ಆದರೆ, ಸಂತ್ರಸ್ತೆಯ ಮೃತದೇಹ ಮನೆಗೆ ಸಾಗಿಸಿದ ಸಮಯದಲ್ಲಿ ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ತಮಗೆ ಹಣ ನೀಡಲು ಬಂದಿದ್ದರು ಸಂತ್ರಸ್ತೆಯ ಪಾಲಕರು ಎತ್ತಿರುವ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಮೌನಕ್ಕೆ ಶರಣಾದರು.