ನ್ಯೂಸ್

ಕಾಂಗ್ರೆಸ್ ಎಂಬ ಮುಳುಗುವ ಹಡಗಿಗೆ ಮಲ್ಲಿಕಾರ್ಜುನ ಖರ್ಗೆ ನಾವಿಕ; ಗೋವಿಂದ ಕಾರಜೋಳ

ಬಾಗಲಕೋಟೆ: ಮುಳುಗುವ ಕಾಂಗ್ರೆಸ್ ಹಡಗಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನ ನಾವಿಕನನ್ನಾಗಿ ಮಾಡುತ್ತಿದ್ದಾರೆ. ಏನೇ ಪ್ರಯೋಗ ಮಾಡಿದರೂ ಈ ದೇಶದಲ್ಲಿ ಕಾಂಗ್ರೆಸ್ ಉಳಿಯಲು ಸಾಧ್ಯವಿಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಖರ್ಗೆ ನಾಯಕತ್ವದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ. ಯುಪಿಎ 10 ವರ್ಷ ಅಧಿಕಾರದಲ್ಲಿದ್ದಾಗ ಖರ್ಗೆಯವರನ್ನ ಯಾಕೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿಲ್ಲ? ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುವಾಗ ಮಾಡಿದ್ರೆ ಅದಕ್ಕೊಂದು ಅರ್ಥ ಇರುತ್ತಿತ್ತು. ರಾಜ್ಯದಲ್ಲಿ ಖರ್ಗೆಯವರನ್ನ ಸಿಎಂ ಮಾಡಬೇಕಿತ್ತು ಯಾಕೆ ಮಾಡಲಿಲ್ಲ ಎಂದು ಗೋವಿಂದ ಕಾರಜೋಳ ಪ್ರಶ್ನಿಸಿದರು.

ದೀನ, ದಲಿತರನ್ನ ವೋಟ್ ಬ್ಯಾಂಕ್ ಮಾಡಲು ರಾಜಕಾರಣ ಮಾಡುತ್ತಾರೆ. ಅವರನ್ನ ಉದ್ಧಾರ ಮಾಡುವುದಾಗಲಿ, ಗೌರವ ಕೊಡುವುದಾಗಲಿ ಕಾಂಗ್ರೆಸ್​ನವರು ಯಾವತ್ತೂ ಮಾಡುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿದೆ ಎಂದು ಗೊತ್ತಾಗಿದೆ. ಹೀಗಾಗಿ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.