ನ್ಯೂಸ್

ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಪ್ರಧಾನಿ ಅಭ್ಯರ್ಥಿಯಾಗಲಿ: ರಾಯರಡ್ಡಿ ಒತ್ತಾಸೆ

ಜೆಡಿಎಸ್ ವ್ಯಾಪಾರಿ ಪಕ್ಷ ಎಂದು ಬಸವರಾಜ ವಾಗ್ದಾಳಿ

,ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ ಮೈತ್ರಿಕೂಟ ಇಂಡಿಯಾದ  ಪ್ರಧಾನಿ ಅಭ್ಯರ್ಥಿಯಾಗಿ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಘೋಷಣೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಚಿವರಾಗಿರುವ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.


ತಮ್ಮ ಕ್ಷೇತ್ರದಲ್ಲಿ ಕೆಕೆಆರ್‌ಡಿಬಿಯಿಂದ ಕೈಗೆತ್ತಿಕೊಳ್ಳಬೇಕಾಗಿರುವ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಗಳ ಕುರಿತ ವಿವರವಾದ ಪಟ್ಟಿಯನ್ನು ಮಂಡಳಿಗೆ   ಸಲ್ಲಿಸಿದ ಬಳಿಕ ಭೇಟಿಯಾದ ಪತ್ರಕರ್ತರ ಜತೆಗೆ ಮಾತನಾಡಿ, ಖರ್ಗೆ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಅಭಿಪ್ರಾಯ.  ಆ ಸಾಮರ್ಥ್ಯವೂ ಅವರಲ್ಲಿದೆ ಎಂದರು.


ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದರೆ ದಲಿತರಿಗೆ ಅವಕಾಶ ಕೊಟ್ಟಂತೆ ಆಗಲಿದೆ. ಅದಲ್ಲದೆ ಅವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರು ಪರಿಣಾಮಕಾರಿ ನಾಯಕರಾಗಿದ್ದಾರೆ. ಹಿಂದೆ ಮನಮೋಹನಸಿಂಗ್ ಅವರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತ್ತು. ಹಾಗೆ ಈ ಸಲ ಖರ್ಗೆ ಅವರಿಗೆ ಅವಕಾಶ ಸಿಕ್ಕರೆ ತಪ್ಪೇನಿದೆ ಎಂದು ರಾಯರಡ್ಡಿ ಪ್ರಶ್ನಿಸಿದರು.


ಜೆಡಿಎಸ್ ವ್ಯಾಪಾರಿ ಪಕ್ಷ ಇದ್ದಂತೆ ಎಂದು ಜರಿದರು. ಬಿಜೆಪಿಯವರು ನಾಲ್ಕು ಸೀಟು ಕೊಡುತ್ತಾರೆ ಎಂದು ಹೇಳಿದ್ದಕ್ಕೆ  ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ನಾವು ಇನ್ನೂ ಎರಡು ಹೆಚ್ಚು ಕೊಡುತ್ತೇವೆ ಎಂದರೆ ನಮ್ಮ ಜತೆಗೆ ಬರುತ್ತಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಏನು ಆಗಲ್ಲ. ಕಾಂಗ್ರೆಸ್‌ಗೆ ತೊಂದರೆಯಾಗಲ್ಲ. ರಾಜಕೀಯ ಪಕ್ಷಗಳು ನೈತಿಕತೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಮಹಾರಾಷ್ಟçದಲ್ಲಿ ಆಗಿದ್ದು ಹೀಗೆ ಅಲ್ಲವೇ ಎಂದು ಪ್ರಶ್ನಿಸಿದರು.


ಬಿ.ಕೆ.ಹರಿಪ್ರಸಾದ ಅವರು ಅತಿ ಹಿಂದುಳಿದ ಸಮುದಾಯದವರಿಗೆ  ಎಲ್ಲಿಯೋ ಅನ್ಯಾಯವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಹೈಕಮಾಂಡ್ ಮತ್ತು ವರಿಷ್ಠ ನಾಯಕರ ನೇರ ಸಂಪರ್ಕವಿದೆ. ಹೀಗಾಗಿ ಅವರು ಇಲ್ಲಿ ಮಾಧ್ಯಮಗಳ ಎದುರು ಮಾತನಾಡುವ ಬದಲಿಗೆ ನೇರವಾಗಿ ಸೋನಿಯಾಗಾಂಧಿ ಅವರಲ್ಲಿ ಹೇಳಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು. ಇಲ್ಲಿ ಮಾತನಾಡಿದರೆ,ಕೇವಲ ಸುದ್ದಿಯಾಗುತ್ತದೆ ಅಷ್ಟೆ ಎಂದರು.


ಸಿಎಂ ಸಿದ್ಧರಾಮಯ್ಯ ಉತ್ತಮ ಆಡಳಿತಗಾರರು. ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟ ವಾದ ದೊಡ ಪರಿಕಲ್ಪನೆ ಇದೆ. ಮಾದರಿ ಆಡಳಿತ ನೀಡುತ್ತಿದ್ದಾರೆ. ನನಗೆ ಮಂತ್ರಿಯಾಗಿಲ್ಲ ಎಂಬುದರ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ.  ಸಚಿವರು-ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಮನ್ವಯತೆ ಇರಲಿ ಎಂಬುದು ನಮ್ಮ ಆಶಯವಾಗಿತ್ತು. ಅದು ಸಭೆಯಿಂದ ಕೈಗೂಡಿದೆ ಎಂದು ರಾಯರಡ್ಡಿ ತಿಳಿಸಿದರು.