ನ್ಯೂಸ್

ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!

ಬೆಂಗಳೂರು: ಚುನಾವಣೆಯ ಬಿಸಿಯ ನಡುವೆ ರಾಜ್ಯ ರಾಜಧಾನಿಯಲ್ಲಿ ಮತ್ತೆ ಅಪರಾಧ ಚಟುವಟಿಕೆಗಳು ಹೆಚ್ಚಾದಂತಿವೆ. ಪ್ರೀತಿ, ಪ್ರೇಮ ಜೊತೆಗೆ ಏರಿಯಾದಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ

ಮಾದಕ ದ್ರವ್ಯ ಸೇವಿಸಿ ಮೋಜು, ಮಸ್ತಿ ಮಾಡುತ್ತಾ ಐಷಾರಾಮಿ ಜೀವನ ನಡೆಸಲು ಖತರ್ನಾಕ್ ಜೋಡಿ ಕಳ್ಳತನದ ದಾರಿ ಕಂಡುಕೊಂಡಿದ್ದಾರೆ. ಪ್ರಿಯಕರ ಕಳ್ಳತನ ನಡೆಸುತ್ತಿದ್ದರೆ ಪ್ರಿಯತಮೆ ಸಾಥ್ ನೀಡಿದ್ದಾಳೆ. ಇಬ್ಬರೂ ಜತೆಗೂಡಿ ನಗರದ ಕೆಲವೆಡೆ ಬೈಕ್ ಕಳ್ಳತನ ನಡೆಸಿದ್ದಾರೆ. ಸದ್ಯ ಇಬ್ಬರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನ ನಡೆಸುತ್ತಿದ್ದ ಪ್ರೇಮಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಪ್ರೀತಿಯಲ್ಲಿ ಬಿದ್ದ ಯುವತಿ ಕಳ್ಳತನಕ್ಕೆ ಸಾಥ್

ಮುರುಗಾ ಮತ್ತು ಆತನ ಪ್ರೇಯಸಿ ಬಂಧಿತ ಆರೋಪಿಗಳು. ಸಿಸಿಟಿವಿ ದ್ಯಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮುರುಗನ ಪ್ರೀತಿಯಲ್ಲಿ ಬಿದ್ದ ಯುವತಿ ಕಳ್ಳತನಕ್ಕೆ ಸಾಥ್ ಕೊಟ್ಟಿದ್ದಾಳೆ. ಇವರಿಬ್ಬರು ಬೈಕ್​ಗಳನ್ನು ಕಳ್ಳತನ ನಡೆಸಿ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದರು. ನಂತರ ಮಾದಕವಸ್ತು ಸೇವಿಸಿ ಮೋಜು ಮಾಡುತ್ತಿದ್ದರು.

ಗಾಂಜಾ ಸೇವಿಸಲು ಕಳ್ಳತನವೇ ಕಸುಬು

ಒಂದು ಬಾರಿ ಮುರುಗಾ ಬೈಕ್ ಕಳ್ಳತನ ನಡೆಸಿದರೆ, ಮತ್ತೊಂದು ಬಾರಿ ಆತನ ಪ್ರೇಯಸಿ ಕಳ್ಳತನಕ್ಕಿಳಿಯುತ್ತಿದ್ದಳು. ಯುವತಿ ಬೈಕ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಜೋಡಿ ಎಂಡಿಎಂಎ, ಗಾಂಜಾ ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದರು. ಬಂಧಿತ ಮುರುಗಾ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗೆ ಬೇಕಾಗಿದ್ದ ಆರೋಪಿ. ಸದ್ಯ ಆರೋಪಿಗಳಿಬ್ಬರಿಂದ 3 ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.