ಚುನಾವಣಾಧಿಕಾರಿ ಅಕ್ರಂ ಪಾಷ ಅವರು ನೂತನ ಸಂಸದ ಮಲ್ಲೇಶ್ ಬಾಬು ಅವರಿಗೆ ಪ್ರಮಾಣ ಪತ್ರ ವಿತರಿಸಿದರು
ಕೋಲಾರ: ತೀವ್ರ ಕುತೂಹಲಗಳ ನಡುವೆ ನಡೆದ ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್&ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು 71,388 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಮೊದಲ ಜೆಡಿಎಸ್ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕ್ಷೇತ್ರದಲ್ಲಿ ಒಟ್ಟು 17,26,914 ಮತದಾರರಿದ್ದು, ಆ ಪೈಕಿ 13,51,646 ಮಂದಿ ಮತ ಚಲಾಯಿಸಿದ್ದಾರೆ. ಚಲಾವಣೆಯಾಗಿರುವ ಮತಗಳ ಪೈಕಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು 6,91,481 ಮತಗಳನ್ನು ಗಳಿಸಿ 71,388 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ 6,20,093 ಮತ ಪಡೆದುಕೊಂಡು ಪರಾಭವಗೊಂಡಿದ್ದಾರೆ. ಇನ್ನು ಉಳಿದ 16 ಮಂದಿ ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅದರಂತೆ ಕೆಜಿಎ್ ಹಾಗೂ ಶಿಡ್ಲಟ್ಟ ಕ್ಷೇತ್ರ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಜೆಡಿಎಸ್ ಅಭ್ಯರ್ಥಿಗೆ ಬಹುಮತ ದೊರೆತಿದೆ.ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯು ರಾಜಕೀಯ ಪಕ್ಷಗಳಿಗೆ ಸವಾಲಾಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರು. ಮಲ್ಲೇಶ್ಬಾಬು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋಲು ಅನುಭವಿಸಿದ್ದರು. ಇದರ ಅನುಕಂಪವೂ ಲಭಿಸಿದೆ, ಜತೆಗೆ ಮೈತ್ರಿ ಧರ್ಮಪಾಲನೆಯಾಗಿದ್ದು ಇದರ ಲಾಭ ದೊರೆತಿದೆ.
ಚುನಾವಣೆಯ ದಿನಾಂಕ ಘೋಷಣೆಯಾದರೂ ಕಾಂಗ್ರೆಸ್ನಲ್ಲಿ ಅಷ್ಟು ಬೇಗ ಟಿಕೆಟ್ ಗೊಂದಲ ಬಗೆಹರಿದಿರಲಿಲ್ಲ. ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಕೆ.ಆರ್.ರಮೇಶ್ಕುಮಾರ್ ತಂಡ ಹಾಗೂ ಎಡಗೈ ಸಮುದಾಯದ ಚಿಕ್ಕಪೆದ್ದಣ್ಣರಿಗೆ ಟಿಕೆಟ್ಗಾಗಿ ಸಚಿವ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿದ್ದರು. ಇದರಿಂದಾಗಿ ಪಕ್ಷದ ಅಭ್ಯರ್ಥಿ ಘೋಷಣೆ ತಡವಾಯಿತು. ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಡೆಗಣಿಸಿದ್ದು ಸೇರಿದಂತೆ ಹಲವು ಪ್ರಮುಖ ಕಾರಣಗಳು ಗೆಲುವಿನ ಹಳಿಗೆ ಬರಲು ಅಡ್ಡಿಯಾದವು.
- ವಿಶೇಷಪೂಜೆ
ಕೋಲಾರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಅವರು ನಗರದ ಕೋಲಾರಮ್ಮ ದೇವಾಲಯ ಹಾಗೂ ತಂದೆ ಸಿ.ಮುನಿಸ್ವಾಮಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದ ಸದಸ್ಯರು, ಜೆಡಿಎಸ್&ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ಆನಂತರ ಸ್ವಗ್ರಾಮ ಕುಂಬಾರಹಳ್ಳಿಯಲ್ಲಿ ಗ್ರಾಮಸ್ಥರೊಂದಿಗೆ ವಿಜಯೋತ್ಸವ ಆಚರಿಸಿದರು. ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಎಂಎಲ್ಸಿ ಇಂಚರ ಗೋವಿಂದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ಕೆ.ಎಸ್.ಮಂಜುನಾಥ್ಗೌಡ, ವೈ.ಸಂಪಂಗಿ, ಮುಖಂಡರಾದ ಸಿಎಂಆರ್ ಶ್ರೀನಾಥ್, ರಾಮೇಗೌಡ ಮತ್ತಿತರರು ಇದ್ದರು.
- ಅಭ್ಯರ್ಥಿಗಳು ಪಡೆದುಕೊಂಡಿರುವ ಮತಗಳು
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಹುಜನ ಸಮಾಜ ಪಕ್ಷದ ಎಸ್.ಬಿ.ಸುರೇಶ್ 4,732, ಸಮಾಜವಾದಿ ಪಕ್ಷದ ಡಿ.ಗೋಪಾಲಕೃಷ್ಣ-1,669, ಆರ್ಪಿಐನ ತಿಮ್ಮರಾಯಪ್ಪ 864, ಉತ್ತಮ ಪ್ರಜಾಕೀಯ ಪಕ್ಷದ ಎ.ದೇವರಾಜ್ 1354, ಕರ್ನಾಟಕ ರಾಷ್ಟ್ರೀಯ ಸಮಿತಿಯ ಎ.ವಿ.ಮಹೇಶ್ಗೆ 1,065, ವಿದುತ್ತಲೈ ಚಿರುತಾಯಿಗಲ್ ಕಚ್ಚಿ ಪಕ್ಷದ ಎಂ.ಸಿ.ಹಲ್ಲಿವೇಣು 521 ಮತ ಪಡೆದರು. ಪಕ್ಷೇತರ ಅಭ್ಯರ್ಥಿಗಳಾದ ಎನ್.ಕೃಷ್ಣಯ್ಯ 443, ಎಸ್.ಎನ್.ನಾರಾಯಣಸ್ವಾಮಿ 1,985, ಎಂಎಸ್.ಬದ್ರಿನಾರಾಯಣ 1,116, ಎಂ.ಮುನಿಗಂಗಪ್ಪ 604, ಆರ್.ರಾಜೇಂದ್ರ 751, ಆರ್.ರಂಜಿತ್ ಕುಮಾರ್ 2,118, ಡಾ.ಎಂ.ವೆಂಕಟಸ್ವಾಮಿ 3354, ಹೋಳೂರು ಶ್ರೀನಿವಾಸ 6,163 ಹಾಗೂ ಎಚ್.ಎನ್.ಸುಮನ್ 6,487 ಮತ ಪಡೆದುಕೊಂಡಿದ್ದಾರೆ.
- ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕಾರಣಗಳು
ಬಿಜೆಪಿ&ಜೆಡಿಎಸ್ ಮೈತ್ರಿ
ನರೇಂದ್ರ ಮೋದಿ ಹವಾ
ಬಂಗಾರಪೇಟೆ ಕ್ಷೇತ್ರದಿಂದ ಎರಡು ಬಾರಿ ಸೋತಿದ್ದ ಅನುಕಂಪ
ಉಭಯ ಪಕ್ಷಗಳ ನಾಯಕರ ಪ್ರಚಾರದ ಲಾಭ
ಸ್ಥಳಿಯ ವ್ಯಕ್ತಿ ಹಾಗೂ ಸಮುದಾಯದ ಬೆಂಬಲ
- ಸೋಲಿಗೆ ಕಾರಣಗಳೇನು?
ತಡವಾಗಿ ಅಭ್ಯರ್ಥಿ ಘೋಷಣೆ
ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಡೆಗಣಿಸಿದ್ದು
ಕ್ಷೇತ್ರದಲ್ಲಿ ಪರಿಚಯ ಇಲ್ಲದಿರುವುದು.
ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಒಕ್ಕಲಿಗ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದು.
ಪಕ್ಷದ ಕಾರ್ಯಕರ್ತರು, ಮುಖಂಡರ ನಡುವಿನ ಗುಂಪುಗಾರಿಕೆ
- ಫಲಿತಾಂಶ ವಿವರ-2024
ಗೆದ್ದ ಅಭ್ಯರ್ಥಿ: ಎಂ.ಮಲ್ಲೇಶ್ಬಾಬು
ಪ: ಜೆಡಿಎಸ್
ಪಡೆದ ಮತ: 6,91,481
ಸಮೀಪದ ಎದುರಾಳಿ: ಕೆ.ವಿ.ಗೌತಮ್
ಪಕ್ಷ: ಕಾಂಗ್ರೆಸ್
ಪಡೆದ ಮತ: 6,20,093
ಗೆಲುವಿನ ಅಂತರ: 71,388
ನೋಟಾ ಮತಗಳು: 5,831