ಎನ್.ಆರ್.ಪುರ: ಬ್ರಾಹ್ಮಣರ ಶಕ್ತಿ ಇರುವುದೇ ಧಾರ್ಮಿಕತೆಯಲ್ಲಿ. ಹೀಗಾಗಿ ಪ್ರತಿಯೊಬ್ಬ ಬ್ರಾಹ್ಮಣರು ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆತೋಟ ತಿಳಿಸಿದರು.
ಯಡಗೆರೆಯ ರಾಮನಾಥೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ತಾಲೂಕು ಘಟಕದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಘಟನೆಗೆ 23 ವಷರ್ ತುಂಬಿದೆ. ಶೃಂಗೇರಿಯಲ್ಲಿ ಪ್ರತಿವಷರ್ ನಡೆಯುವ ಗುರುದರ್ಶನ ಕಾರ್ಯಕ್ರಮಕ್ಕೆ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕೋಟಿ ಗಾಯತ್ರಿ ಯಜ್ಞ ಮುಂದುವರಿಸಬೇಕು ಎಂದರು.
ಶಿವಮೊಗ್ಗ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಕೆ.ಆರ್.ಶಿವಕುಮಾರ್ ಮಾತನಾಡಿ, ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಆರ್ಥಿಕ ಸಂಸ್ಥೆಯಾದ ಶಾರದಾ ಸೌಹಾರ್ದ ಸಂಘವು 2006ರಿಂದ ಹಿರಿಯರಾದ ಶಿವಶಂಕರ್ ನೇತೃತ್ವದಲ್ಲಿ ಪ್ರಾರಂಭವಾಗಿದೆ. ಶಾರದಾ ಸೌಹಾರ್ದ ಸಹಕಾರ ಸಂಘದಿಂದ ಕೋಲ್ಡ್ ಸ್ಟೋರೇಜ್ ಪ್ರಾರಂಭಿಸಲಾಗಿದೆ ಎಂದರು.
ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕದ ಅಧ್ಯಕ್ಷ ಸೇತುವೆಮನೆ ಸುಬ್ರಹ್ಮಣ್ಯ ಮಾತನಾಡಿ, ಸಮಾಜ ಬಾಂಧವರು ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಗುರುದರ್ಶನ, ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಗೌರವಾಧ್ಯಕ್ಷ ಚಂದ್ರಶೇಖರ್, ಯುವಬಳಗದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ನಿಶಾಂತ ಹೆಬ್ಬಾರ್, ಶಿವಮೊಗ್ಗ ಶಾರದಾ ಸೌಹಾರ್ದ ವಿವಿಧೋದ್ದೇಶ ಸಹಕಾರಿಯ ನಿರ್ದೇಶಕ ವೈ.ಎಂ.ಮಧು, ಯಡಗೆರೆ ಮಂಜುನಾಥ್, ಎ.ವಿ.ಪ್ರಶಾಂತ್, ಎ.ಎಸ್.ವೆಂಕಟರಮಣ ಇದ್ದರು.