ನ್ಯೂಸ್

ಈ ಮೂರು ದಿನ ಭಕ್ತರಿಗಿಲ್ಲ ಮಾದಪ್ಪನ ದರ್ಶನ, ಯಾಕೆ ಗೊತ್ತಾ?

ಚಾಮರಾಜನಗರ: ಜಿಲ್ಲೆಯ ದಟ್ಟ ಕಾನನದಲ್ಲಿ ನೆಲೆಗೊಂಡಿರುವ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಇದೇ ತಿಂಗಳು ಮೂರು ದಿನ ಭಕ್ತರಿಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹನೂರು ತಾಲೂಕಿನಲ್ಲಿ 77 ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಮಲೆಮಹದೇಶ್ವಬೆಟ್ಟದ ಸ್ವಾಮಿ ಮಾದಪ್ಪನ ದರ್ಶನಕ್ಕೆ ನಿತ್ಯ ಸಾವಿರಾರು ಜನ ಬರುತ್ತಲೇ ಇರುತ್ತಾರೆ. ಇನ್ನು ಹಬ್ಬ, ಅಮಾವಾಸ್ಯೆ ದಿನಗಳಂದು ಇದರ ಸಂಖ್ಯೆ ತುಸು ಹೆಚ್ಚು. ಆದರೀಗ ಎಲ್ಲೆಡೆ ಕರೊನಾ ಸೋಂಕಿನ ಭಿತಿ ಆವರಿಸಿದೆ. ಹಾಗಾಗಿ ಮಹಾಲಯ ಅಮಾವಾಸ್ಯೆ ಹಿನ್ನೆಲೆ ಸೆ. 16 ರಿಂದ 18ರವರೆಗೆ ಮಾದಪ್ಪನ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

ಅಮಾವಾಸ್ಯೆ ಪ್ರಯುಕ್ತ ಮಾದಪ್ಪನ ದೇವಸ್ಥಾನದಲ್ಲಿ ಎಣ್ಣೆ ಮಜ್ಜನ ಪೂಜೆ ನಡೆಯಲಿದ್ದು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ಡಿಸಿ ತಿಳಿಸಿದ್ದಾರೆ.