ನ್ಯೂಸ್

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ಡೀವ್ಸ್​ ಸಚಿವರ ರಾಜೀನಾಮೆ; ಇದರ ಹಿಂದಿನ ಅಸಲಿಯತ್ತು ಏನು ಗೊತ್ತಾ?

ಮಾಲ್ಡೀವ್ಸ್​​​: ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಹ್ಷೇಪಾರ್ಹ ಹೇಳಿಕೆ ನೀಡಿದ್ದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ರಾಯಿಟರ್ಸ್ ಅಧಿಕಾರಿಯೊಬ್ಬರು ಬುಧವಾರ ವರದಿ ಮಾಡಿದ್ದಾರೆ. ಮುಯಿಝು ಶೀಘ್ರದಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ ಎಂಬ ಸಮಯದಲ್ಲಿ ಸಚಿವರ ರಾಜೀನಾಮೆಯ ಮಾಹಿತಿ ಬಂದಿದೆ. ಈ ವರ್ಷದ ಜನವರಿಯಲ್ಲಿ ಮೊಹಮ್ಮದ್ ಮುಯಿಝು ಅವರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮ್ಮ ಮೂವರು ಸಚಿವರನ್ನು ಅಮಾನತುಗೊಳಿಸಿದ್ದರು.

ಮಾಲ್ಡೀವ್ಸ್​​​ ಅಧ್ಯಕ್ಷ ಮೊಹಮ್ಮದ್ ಮುಯಿಝು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಲ್ಡೀವ್ಸ್ ಸರ್ಕಾರದ ವಕ್ತಾರ ಹೀನಾ ವಲೀದ್ ಹೇಳಿದ್ದಾರೆ. ತಮ್ಮ ಸರ್ಕಾರದ ಇಬ್ಬರು ಸಚಿವರಾದ ಮರ್ಯಮ್ ಶೆಯುನಾ ಮತ್ತು ಮಲ್ಶಾ ಷರೀಫ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ದಿನವೇ ಮುಯಿಝು ಅವರ ಮುಂಬರುವ ಭೇಟಿಯನ್ನು ವಲೀದ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ಹಿಂದೆ ಮಾಲ್ಡೀವ್ಸ್ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ತಕ್ಷಣ ಭಾರತಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದರು. ಆದರೆ ಚೀನಾದೊಂದಿಗೆ ಸ್ನೇಹ ಹೊಂದಿರುವ ಮುಯಿಝು ಇನ್ನೂ ಭಾರತಕ್ಕೆ ಅಧಿಕೃತ ಭೇಟಿ ನೀಡಿಲ್ಲ.

ಅವರಿಬ್ಬರೂ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸ್ಥಳಿಯ ಮಾಧ್ಯಮ ವರದಿ ಮಾಡಿದೆ. ಭಾರತಕ್ಕೆ ಮಾಲ್ಡೀವ್ಸ್​ ಅಧ್ಯಕ್ಷರ ಭೇಟಿಗೂ ಮುನ್ನವೇ ರಾಜೀನಾಮೆ ಮಾಹಿತಿ ಬಂದಿರುವುದು ಮಯಿಝಿ ಸರ್ಕಾರ ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಗಂಭೀರವಾಗಿದೆ ಎಂಬುದಕ್ಕೆ ಸೂಚನೆಯಾಗಿದೆ.

ಜನವರಿಯಲ್ಲಿ ಅಮಾನತುಗೊಂಡ ಮೂರನೇ ಸಚಿವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ರಾಜೀನಾಮೆ ನೀಡಿದ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದರು. ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಇದು ಪ್ರವಾಸೋದ್ಯಮ ಸ್ಥಳ ಎಂದು ಉತ್ತೇಜಿಸಿದ ಬಳಿಕ ಆ ಸಚಿವರಿಂದ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳು ಬಂದಿದ್ದವು.

ಮುಯಿಝು ಅವರ ಚುನಾವಣಾ ಗೆಲುವು ಮತ್ತು ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಬದಲಿಸುವ ಅವರ ಬೇಡಿಕೆಯ ನಂತರ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟವು. ಸಚಿವರ ರಾಜೀನಾಮೆ ಕುರಿತು ಮುಯಿಝ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಸರ್ಕಾರಿ ಅಧಿಕಾರಿಯೊಬ್ಬರು ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಆದ್ರೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು ಎನ್ನಲಾಗಿದೆ. (ಏಜೆನ್ಸೀಸ್​​)