ಕೇರಳ: ಮಲಯಾಳಂ ಕಿರುತೆರೆ ನಟಿ ಅಪರ್ಣಾ ಪಿ ನಾಯರ್ ಅವರು ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಪರ್ಣಾ ಪಿ ನಾಯರ್, ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪರ್ಣಾ ಅವರು ಆಗಸ್ಟ್ 31ರ ಗುರುವಾರ ಸಂಜೆ ತಿರುವನಂತಪುರಂನ ಕರಮಾನದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ನಡೆದಾಗ ಅಪರ್ಣಾ ಅವರ ತಾಯಿ ಮತ್ತು ಸಹೋದರಿ ಇಬ್ಬರೂ ಮನೆಯಲ್ಲಿದ್ದರು. ಅಪರ್ಣಾ ಬೆಡ್ ರೂಂನಲ್ಲಿ ನೇಣು ಬಿಗಿದುಕೊಂಡಿದ್ದನ್ನು ನೋಡಿದ ಕುಟುಂಬಸ್ಥರು ಆಕೆಯನ್ನು ಕಿಲ್ಲಿಪಾಲೆಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ನಟಿಯ ತಾಯಿ ಮತ್ತು ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಕರಮಣ ಠಾಣೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ.
ಅಪರ್ಣಾಳ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅಪರ್ಣಾ ಕೌಟುಂಬಿಕ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಮೇಲಾಗಿ ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗದ ಕಾರಣ ಪೊಲೀಸರ ಅನುಮಾನ ಬಲವಾಗುತ್ತಿದೆ. ಈ ಘಟನೆ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಪರ್ಣಾ ಪಿ ನಾಯರ್ ಅವರು 'ಚಂದನಮಜ', 'ಆತ್ಮಸಖಿ', ಮತ್ತು 'ದೇವಸ್ಪರ್ಸಂ' ನಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ನಟಿಯಾಗಿ ಉತ್ತಮ ಹೆಸರನ್ನು ಗಳಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.