Oplus_131072 
ನ್ಯೂಸ್

ಮಕ್ಕಳ ಜೊತೆಗೆ ಮಿಂದೆದ್ದ ಡಿಸಿಎಂ ಡಿಕೆಶಿ ಬಸ್ ಪ್ರೀ ಅಂತ ನಮ್ಮಮ್ಮ ಅಕ್ಕ ತಂಗಿಯನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗ್ತಾರೆ, ಗಂಡು ಮಕ್ಕಳು ಏನ್ ಮಾಡಬೇಕು? ನಾನು ಸಿಎಂ ಆಗಬೇಕಾದರೆ ಏನು ಮಾಡಬೇಕೆಂದು ಪ್ರಶ್ನೆ

Bengaluru - Political - Shivananda Tagadur

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:

ವಿಧಾನಸೌಧದಲ್ಲಿ ನಡೆದ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಮಿಂದೆದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಕ್ಕಳ ಪ್ರಶ್ನೆಗೆ ಒಂದಿಷ್ಟು ಬಿಗುಮಾನವಿಲ್ಲದೆ, ಲವಲವಿಕೆಯಲ್ಲಿಯೇ ಉತ್ತರಿಸಿದರು.

ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ಅಮ್ಮಂದಿರು, ನಮ್ಮ ಅಕ್ಕ ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ? ಎನ್ನುವ ಪ್ರಶ್ನೆ ನೀಲಸಂದ್ರದ ಪಾಲಿಕೆ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಚರಣ್ ಅವರದ್ದಾಗಿತ್ತು.

ಅದಕ್ಕೆ ಉತ್ತರಿಸಿದ ಡಿಕೆಶಿ, ನಿಮ್ಮ ತಾಯಿಗೆ 2000, ಬಸ್ ಉಚಿತ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಪ್ರಶ್ನೆಗೆ ಸರ್ಕಾರದಲ್ಲಿ ಚರ್ಚಿಸಿ ಒಂದು ವಯೋಮಿತಿಯವರೆಗೆ ಉಚಿತ ಕೊಡಬಹುದೇ ಎಂದು ಯೋಚಿಸಿ ಮುಂದೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಪಂಚಶೀಲನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿದ್ಯಾಸಾಗರ್, ನಾನು ಈ ರಾಜ್ಯದ ಸಿಎಂ ಆಗಬೇಕು, ಇದಕ್ಕಾಗಿ ಏನು ಓದಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ಅದಕ್ಕಾಗಿ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು ಎಂದರು.

ಹೇರೋಹಳ್ಳಿ ಪಾಲಿಕೆ ಪ್ರೌಢಶಾಲೆ ವಿದ್ಯಾರ್ಥಿನಿ ಶಾಲಿನಿ ಬಿ.ಆರ್. ಪ್ರಶ್ನೆಗೆ ಗ್ರಾಮೀಣ ಭಾಗದಲ್ಲಿ ಪ್ರೌಢಶಾಲೆಗಳ ಕೊರತೆ ಇರುವುದು ಗಮನಕ್ಕೆ ಇದೆ. ಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು, 3 ಎಕರೆ ಪ್ರದೇಶದಲ್ಲಿ 2000 ಕಡೆ ಶಾಲೆ ನಿರ್ಮಾಣ ಮಾಡಲು ಮುಂದಾಗುತ್ತಿದೆ. ಅದನ್ನು ಖಾಸಗಿ ಶಾಲೆಗಳು ದತ್ತು ಪಡೆದುಕೊಳ್ಳಬೇಕು. ನಗರದಲ್ಲಿ ಬಂದು ವಿದ್ಯಾಭಾಸ ಪಡೆಯುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ ಎಂದರು.

ಪ್ರಶ್ನೆಗಳಿಗೆ ಡಿಸಿಎಂ ಉತ್ತರ

*ರಾಜ್ಯದಲ್ಲಿ ಸರ್ಕಾರಿ, ಪಾಲಿಕೆ ಸೇರಿ ಸುಮಾರು 46,000 ಶಾಲೆಗಳಿದ್ದು, ಎಲ್ಲರಿಗೂ ಗುಣಮಟ್ಟ ಶಿಕ್ಷಣ ನೀಡುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಯಾರ ಪ್ರಭಾವಕ್ಕೂ ಒಳಗಾಗದೆ ಮೆರಿಟ್ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ಹೊಸ ಸ್ಕೀಮ್ ತರಲಾಗುತ್ತಿದ್ದು, ಸಿಬಿಎಸ್‌ಸಿ, ಐಸಿಎಸ್‌ಸಿ ಶಿಕ್ಷಣ ನೀಡುವ ಹಾಗೆ ಸರ್ಕಾರಿ ಶಾಲೆಗಳನ್ನು ಹೊಸ ವ್ಯವಸ್ಥೆ ಜಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ.

*ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಕಡೆ ಹೆಚ್ಚು ಗೋಧಿ ಬೆಳೆಯುತ್ತಾರೆ, ಆ ಹುಲ್ಲನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಸುಡುತ್ತಿದ್ದಾರೆ. ಆದ್ದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇಲ್ಲ, ವಾಹನಗಳ ಮಾಲಿನ್ಯ ಅಷ್ಟೇ ಇದ್ದು, ಕಾರ್ಖಾನೆಗಳನ್ನು ಕೂಡಾ ಹೊರ ಭಾಗದಲ್ಲಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ನಮ್ಮ ನಾಗರೀಕರೀಕರು ಸಹ ಪರಿಸರ ಸ್ನೇಹಿ ವಾಹನಗಳಿಗೆ ಬದಲಾಗಬೇಕು ಎಂದರು.

*ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಆಗಲಿ, ಇಡೀ ರಾಜ್ಯ ಒಂದೇ, ಎಲ್ಲಾ ಕಡೆ ಒಂದೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

*ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಮುಂಬೈ, ಚೆನ್ನೈ, ಕಲ್ಕತ್ತಾಗೆ ಸಮುದ್ರ ಹತ್ತಿರವಾಗಿದೆ. ಸಮುದ್ರದಿಂದ ನಗರಗಳು ಬೆಳೆದು ಅಲ್ಲಿ ವಹಿವಾಟು ವ್ಯವಹಾರ ಹೆಚ್ಚಾಗಿರುತ್ತದೆ. ಆದರೆ, ಇಲ್ಲಿ ಆ ರೀತಿಯ ವಹಿವಾಟಿಲ್ಲ. ನಮ್ಮಲ್ಲಿರುವ ಹವಾಗುಣದಿಂದ, ಇಲ್ಲಿ ಐಟಿ ಹಬ್, ಟೆಕ್ನಿಕಲ್ ಹಬ್, ಮೆಡಿಕಲ್ ಹಬ್ ಆಗಿ ಬೆಳೆದಿದೆ. 20 ವರ್ಷದಿಂದ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಜನಸಂಖ್ಯೆಯಿತ್ತು. ಇದೀಗ ದ್ವಿಗುಣವಾಗಿ 1.40 ಕೋಟಿ ಜನಸಂಖ್ಯೆಯಾಗಿದೆ. ಅದೇ ರಸ್ತೆಯಿದ್ದು, ವಾಹನಗಳ ಸಂಖ್ಯೆ ಮಾತ್ರ ಹೆಚ್ಚಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸರ್ಕಾರದಿಂದ ಎಷ್ಟೇ ಬಸ್, ಮೆಟ್ರೋ ಹಾಕಿದರು ಕೂಡಾ ಸ್ವಂತ ವವಾಹನಗಳನ್ನೇ ಬಳಸುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ರಿಂಗ್ ರಸ್ತೆ, ಮೆಟ್ರೋ 3ನೇ ಫೇಸ್ ಮಾಡಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಮೆಟ್ರೋ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ ಸಬ್ ಅರ್ಬನ್ ಮಾಡಲಾಗುತ್ತಿದೆ. ಎಷ್ಟೇ ಮೇಲ್ಸೇತುವೆ ಮಾಡುತ್ತಿದ್ದರೂ, ಸಂಚಾರ ದಟ್ಟಣೆ ನಿಯಂತ್ರಣವಾಗುತ್ತಿಲ್ಲ. ಇದೀಗ ಟನಲ್ ರಸ್ತೆ ಕೂಡಾ ಪ್ರಾರಂಭಿಸಲಾಗುತ್ತಿದೆ.

ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ರಮ್ಯಾ, ರಮೇಶ್, ಕರೀಗೌಡ, ಪಾಲಿಕೆ ಹಿರಿಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.