ಸಾಗರ: ಕಲಾವಿದ ಯಶಸ್ವಿ ಆಗಬೇಕಾದರೆ ನಿರಂತರ ಪರಿಶ್ರಮದ ಅಗತ್ಯವಿದೆ. ಸಾಧನೆ ಸುಲಭ ಮಾರ್ಗವಲ್ಲ. ಸಾಧಿಸುವ ಛಲ ಇರಬೇಕು ಎಂದು ನೃತ್ಯ ಗುರು ವಿದ್ವಾನ್ ಜನಾರ್ದನ ಹೇಳಿದರು.
ಲಯಾಂಕುರ ಟ್ರಸ್ಟ್, ನಾ ಧಿನ್ ಧಿನ್ ನಾ ಹಿಂದುಸ್ತಾನಿ ತಬಲಾ ವಿದ್ಯಾಲಯದಿಂದ ಅಜಿತ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಪಂಡಿತ್ ರಾಜರಾಮ್ ಸೊರಬ್ ಸ್ಮರಣಾರ್ಥ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೇವಲ ಕಲಾವಿದರಾದರೆ ಸಾಲದು. ಅದು ಪ್ರದರ್ಶನದ ಗುರಿ ಮಾತ್ರ ಹೊಂದಿ, ಸಂಪತ್ತು ಮತ್ತು ಕೀರ್ತಿಯ ಆಮಿಷದಲ್ಲಿ ಕಳೆದು ಹೋಗುವ ಸಾಧ್ಯತೆ ಹೆಚ್ಚು. ಹಾಗಾಗಿ ಕಲಾವಿದನ ಗುರಿ ಕಲಾ ಸಾಧಕನಾಗುವುದು ಎಂಬ ಅರಿವಿನೊಂದಿಗೆ ನಿತ್ಯ ಕಲಿಕೆ ಅವಶ್ಯ. ಗೀತೆ, ವಾದ್ಯ, ನೃತ್ಯ ಇವುಗಳು ಸೇರಿಯೇ ಸಂಗೀತ. ಈ ಕಲೆಗಳಲ್ಲಿ ಸಾಧನೆ ಮಾಡುವುದಕ್ಕೆ ಪ್ರೇರಣೆಗಾಗಿಯೇ ಇಂತಹ ಸನ್ಮಾನಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.
ಮಿದುಳು ಮತ್ತು ನರರೋಗ ತಜ್ಞ ಡಾ. ಸುಮಂತ್ ಬಳಗಂಡಿ ಮಾತನಾಡಿ, ಸಂಗೀತ ಕಲೆ ನರರೋಗಗಳ ಆರೋಗ್ಯದ ದೃಷ್ಟಿಯಲ್ಲಿ ಮಹತ್ವ ಪಡೆದಿದೆ ಎಂದರು.
ವಿಜ್ಞಾನ ಸಂಶೋಧನೆಯ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಕಂಡಿರುವ ಬಾಲ ಪ್ರತಿಭೆ ಅಭಿನಂದನ್ ಆರ್. ಕೋಳಿವಾಡ್ ಅವರನ್ನು ಸನ್ಮಾನಿಸಲಾಯಿತು. ತಬಲಾ ಗುರು ಪಂಡಿತ್ ಭಾಸ್ಕರ ವಿ. ಹೆಗಡೆ, ಪಂಡಿತ ಮಡಿವಾಳಯ್ಯ ಸಾಲಿ ಹುಮನಾಬಾದ್, ಸಂಸ್ಥೆ ಸಂಸ್ಥಾಪಕ ವಿಜೇಂದ್ರ ಆರ್. ಕುಂಸಿ, ಸಂಸ್ಥೆ ಅಧ್ಯಾಪಕ ವಿದ್ವಾನ್ ನಿಖಿಲ್ ಕುಂಸಿ, ಬಿ.ಜಿ.ಮಂಜಪ್ಪ, ಮಹಾಲಕ್ಷ್ಮೀ ಇತರರಿದ್ದರು.
ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ವಾನ್ ಸಿ.ಎನ್.ಮಾಧವ ಭಟ್ ಚೆನ್ನಿಗನತೋಟ ಅವರ ಗಾಯನ, ಡಾ. ಉದಯರಾಜ್ ಕರ್ಪೂರ್, ಬಾಲ ಪ್ರತಿಭೆ ಪ್ರದ್ಯುಮ್ನ ಕರ್ಪೂರ್ ತಬಲಾ ವಾದನ ಮೆಚ್ಚುಗೆ ಪಡೆಯಿತು.