ಶಿಕಾರಿಪುರ: ವಿದ್ಯಾರ್ಥಿಗಳು ಓದು ಬರಹದ ಜತೆಯಲ್ಲಿ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಮಧುಸೂದನ್ ಹೇಳಿದರು.
ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಯೋಗ, ವಾಯುವಿಹಾರ ಮತ್ತು ಕ್ರೀಡೆಗಳಿಗೆ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.
ನಿರಂತರ ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡಲು ಸಾಧ್ಯ. ಎಲ್ಲ ಸಾಧಕರು ವೃತ್ತಿ ಜತೆಗೆ ಒಂದು ಪ್ರವೃತ್ತಿ ಪಾಲಿಸುತ್ತಾರೆ. ಮಕ್ಕಳು ದಿನನಿತ್ಯದ ಚಟುವಟಿಕೆಗಳನ್ನು ತಪ್ಪದೇ ಮಾಡಬೇಕು ಎಂದರು.
ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ವೀರೇಂದ್ರ ಮಾತನಾಡಿ, ಶಾಲೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಉನ್ನತ ಹಂತ ತಲುಪಬೇಕು. ಪಾಲಕರ ನೀರಿಕ್ಷೆಗಳನ್ನು ಈಡೇರಿಸಬೇಕು. ಸಂಗೀತ, ನೃತ್ಯ, ಭರತನಾಟ್ಯ, ಕ್ರೀಡೆಗಳಿಗೂ ಮಹತ್ವ ನೀಡಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಪಿ.ವಿಶ್ವನಾಥ ಮಾತನಾಡಿ, ಮಕ್ಕಳು ಪಾಲಕರಿಗೆ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾರ್ಥಕ ಬದುಕು ನಡೆಸಲು ಪೂರಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಗುರಿ ಕಡೆಗೆ ನಿರಂತರ ಪರಿಶ್ರಮ ವಹಿಸಿ ಮುನ್ನಡೆಯಬೇಕು ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಪ್ರಾಚಾರ್ಯ ಸಿದ್ದೇಶ್ವರ, ಶಾಲಾ ಪ್ರಭಾರ ಮುಖ್ಯಶಿಕ್ಷಕ ಪ್ರಶಾಂತ ಕುಬಸದ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.