ಚಿಕ್ಕಮಗಳೂರು: ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡಿದರೆ ಪ್ರಗತಿ ತೋರಿಸಲು ಸಾಧ್ಯವಿಲ್ಲ. ಯೋಜನೆಗಳ ಪ್ರಯೋಜನ ಸಾರ್ವಜನಿಕರಿಗೆ ತಲುಪಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮಗಳ ಮೂಲ ಉದ್ದೇಶದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಸ್ವಯಂಪ್ರೇರಿತರಾಗಿ ಸೌಲಭ್ಯ ಪಡೆದುಕೊಳ್ಳಲು ಮುಂದಾಗುತ್ತಾರೆ ಎಂದರು.
ದಡರಾ, ರುಬೆಲ್ಲಾ ಲಸಿಕೆಯ ಮೊದಲ ಸುತ್ತಿನ ಅಭಿಯಾನ ನಡೆಸಲಾಗಿದ್ದು 2ನೇ ಸುತ್ತಿನ ಅಭಿಯಾನವನ್ನೂ ಯಶಸ್ವಿಯಾಗಿಸಬೇಕು. ಶೇ.100ರಷ್ಟು ಅರ್ಹರಿಗೆ ಲಸಿಕೆ ಹಾಕಬೇಕು. ಇದರಿಂದಾಗಿ ಆರೋಗ್ಯದ ಮೇಲೆ ಯಾವುದೆ ಅಡ್ಡಪರಿಣಾಮ ಬೀರುವುದಿಲ್ಲ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ದಡರಾ, ರುಬೆಲ್ಲಾ ಸೋಂಕಿತ ಪ್ರಕರಣಗಳು ಎಷ್ಟು ಪತ್ತೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಡಿಸಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಈಗಾಗಲೇ ಮೊದಲ ಸುತ್ತಿನ ಲಸಿಕಾ ಅಭಿಯಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ಇದೀಗ 2ನೇ ಸುತ್ತಿನ ಅಭಿಯಾನವನ್ನು ಸೆ.11ರಿಂದ 16ರವರೆಗೆ ಹಮ್ಮಿಕೊಳ್ಳಲಾಗಿದ್ದು ಇದಕ್ಕೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಕೋರಿದರು.
ಇಂದ್ರಧನುಷ್ ಯೋಜನೆಯಡಿ ರುಬೆಲ್ಲಾ, ದಡರಾ ಲಸಿಕೆಯನ್ನು ಮೊದಲ ಸುತ್ತಿನಲ್ಲಿ 2 ವರ್ಷದೊಳಗಿನ 1741 ಮಗುವಿಗೆ, 437 ಗರ್ಭಿಣಿಯರಿಗೆ ಹಾಕಲಾಗಿದೆ. ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದು ಅವರನ್ನು ಮನವೊಲಿಸಿ ಲಸಿಕೆ ನೀಡಲಾಗಿದೆ. ಅದೇ ರೀತಿ 2ನೇ ಸುತ್ತಿನ ಅಭಿಯಾನ ಯಶಸ್ಸಿಗೆ ಕ್ರಮ ಕೈಗೊಳ್ಳಲಾಗಿದೆ. ಅರ್ಹರು ತಪ್ಪದೆ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬರುವ ಗರ್ಭಿಣಿ ಮತ್ತು ಮಗುವಿನ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗುವುದು. ಸೋಂಕು ದೃಢಪಟ್ಟರೆ ಅವರಿಗೆ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಿ ಕಳಿಸುತ್ತಾರೆ. ಗರ್ಭಿಣಿ ಹಾಗೂ ಮಗುವಿದ್ದರೆ ಅಭಿಯಾನ ಕುರಿತು ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ತಾಯಿ ಮತ್ತು ಮಕ್ಕಳ ಖಾಸಗಿ ಆಸ್ಪತ್ರೆಗಳಿಂದ ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್‌ಒ ಕೆಲವರು ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ ಎಂದು ಉತ್ತರಿಸಿದರು. ಇದರಿಂದ ಗರಂ ಆದ ಡಿಸಿ, ಖಾಸಗಿ ಆಸ್ಪತ್ರೆಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಅವರಿಗೆ ಗಂಭೀರತೆಯಿಲ್ಲವೆ, ಕೂಡಲೇ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ ತನಿಖಾ ತಂಡದವರು ಏನು ಮಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿಯಾನದ ಯಶಸ್ಸಿಗೆ ಶಿಕ್ಷಣ, ಕಾರ್ಮಿಕ ಇಲಾಖೆಯ ಪಾತ್ರ ಪ್ರಮುಖ. ಜಿಲ್ಲೆಯಲ್ಲಿ ಹೊರಗಿನಿಂದ ಬಂದಂತಹ ಕಾರ್ಮಿಕ ಕುಟುಂಬಗಳು ಹೆಚ್ಚಾಗಿವೆ. ಇಲಾಖೆಯ ಅಧಿಕಾರಿಗಳು ಕಾರ್ಮಿಕರು ವಾಸವಿರುವ ಪ್ರದೇಶದಲ್ಲಿ ಅಭಿಯಾನ ನಡೆಸಬೇಕು. ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಆರ್‌ಸಿಎಚ್‌ಒ ಡಾ.ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ ಇತರರಿದ್ದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಾರು ಸಹ ಸಭೆಗೆ ಹಾಜರಾಗಿರಲಿಲ್ಲ, ಸಭೆಯ ಮಾಹಿತಿ ಕಳುಹಿಸಿಲ್ಲವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದರು. ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿದ್ದು ಹೊರ ರಾಜ್ಯಗಳಿಂದ ಕಾರ್ಮಿಕರು ಬಂದು ವಾಸವಿದ್ದಾರೆ ಎಂದು ಹೇಳುತ್ತಾರೆ. ಇಂತಹ ಸಭೆಗಳಿಗೆ ಬರಲು ಅವರಿಗೆ ಏನು ಸಮಸ್ಯೆ, ಕೂಡಲೇ ಶೋಕಾಸ್ ನೋಟಿಸ್ ಕಳುಹಿಸಲು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಶ್ರೇಯಾಂಕ ವ್ಯವಸ್ಥೆ ಜಾರಿಗೆ ತಂದಿದ್ದು ಈಗಾಗಲೇ ಗ್ರಾಪಂ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಇದನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಗಳಿಗೆ ನಿಗದಿಪಡಿಸಿರುವ ಆಂಶಗಳಲ್ಲಿ ಪ್ರಗತಿ ಸಾಧನೆ ಮಾಡಬೇಕು. ಯಾರು ಸಾಧನೆಯಲ್ಲಿ ಹಿಂದೆ ಇರುತ್ತಾರೊ ಅವರು ಹೊಣೆಯನ್ನು ಒತ್ತು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರಿ ಆಸ್ಪತ್ರೆಗಳ ಆಸ್ತಿ ಸಂಬಂಧ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಒಂದು ವೇಳೆ ಜಾಗ ಒತ್ತುವರಿಯಾಗಿದ್ದರೆ ಡಿಸಿ ಅಥವಾ ಜಿಪಂಗೆ ಪತ್ರ ಬರೆದರೆ ತೆರವುಗೊಳಿಸಿ ಗಡಿ ಗುರುತಿಸಲಾಗುವುದು. ಒಂದು ವೇಳೆ ಕಾಂಪೌಂಡ್ ಇಲ್ಲದಿದ್ದರೆ ಕೂಡಲೇ ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರ್‌ಸಿಎಚ್‌ಒ ಡಾ.ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ ಮತಿತರರು ಹಾಜರಿದ್ದರು.