ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಕನ್ನಡ ಜ್ಯೋತಿ ರಥ ಸ್ವಾಗತ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಶೈಲಾ ಮಡ್ಡಿ, ಡಿ.ಮಂಜುನಾಥ್, ಕೆ.ಎಸ್.ಹುಚ್ರಾಯಪ್ಪ, ಎಚ್.ಎಸ್.ರಘು ಇತರರಿದ್ದರು. 
ನ್ಯೂಸ್

ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿ

ಶಿಕಾರಿಪುರ: ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸ ಇದ್ದು ಕನ್ನಡ ನಾಡು-ನುಡಿಗೆ ದೇಶದಲ್ಲಿ ವಿಶೇಷ ಸ್ಥಾನಮಾನವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಮಂಡ್ಯದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ಶಿಕಾರಿಪುರದಲ್ಲಿ ಸ್ವಾಗತಿಸಿ ಮಾತನಾಡಿ, ನಾವು ಪರಭಾಷೆ ದ್ವೇಷಿಸುವುದಿಲ್ಲ. ಆದರೆ ಕನ್ನಡದ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ನಾವು ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.

ಅತ್ತಿಬೆಲೆಯಲ್ಲಿ ಸ್ವಾಗತ: ಶಿಕಾರಿಪುರ ತಾಲೂಕಿನ ಗಡಿಭಾಗ ಅತ್ತಿಬೆಲೆಯಿಂದ ಉಪತಹಸೀಲ್ದಾರ್ ವಿನಯ್ ಆರಾಧ್ಯ ನೇತೃತ್ವದಲ್ಲಿ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ವಿದ್ಯಾರ್ಥಿಗಳು ಕನ್ನಡಾಸಕ್ತರು ಕನ್ನಡ ಜ್ಯೋತಿ ರಥವನ್ನು ಸ್ವಾಗತಿಸಿ ಶಿಕಾರಿಪುರಕ್ಕೆ ಕರೆತರಲಾ ಯಿತು. ತಾಪಂ ಕಚೇರಿ ಮುಂಭಾಗದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಕಸಾಪ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಜ್ಯೋತಿ ರಥ ಶಿರಾಳಕೊಪ್ಪದ ಕಡೆಗೆ ಸಾಗಿತು.

ಕನ್ನಡ ಜ್ಯೋತಿ ರಥ ನಾಡಿನಾದ್ಯಂತ ಸಂಚರಿಸುವ ಮೂಲಕ ಕನ್ನಡದ ಬಗ್ಗೆ ವಿಶೇಷ ಜಾಗೃತಿ ಮೂಡಿಸುತ್ತಿದ್ದು ಕನ್ನಡ ಸಾಹಿತ್ಯ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಬೇಕು. ಕನ್ನಡದ ಪುಸ್ತಕಗಳು ಪ್ರತಿ ಮನೆಗಳಲ್ಲೂ ಇರಬೇಕು. ಕನ್ನಡ ನಮ್ಮ ಬದುಕಾಗಬೇಕು, ನಮ್ಮ ಉಸಿರಾಗಬೇಕು ಎಂದರು.

ಹೆಚ್ಚಿನ ಅನುದಾನ ನೀಡಿದ ಬಿಎಸ್‌ವೈ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ತಾಲೂಕು ಕಸಾಪ ಸಮ್ಮೇಳನಕ್ಕೆ 1 ಲಕ್ಷ ರೂ., ಜಿಲ್ಲಾ ಸಮ್ಮೇಳನಕ್ಕೆ 5 ಲಕ್ಷ ರೂ. ಹಾಗೂ ರಾಜ್ಯ ಸಮ್ಮೇಳನಕ್ಕೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸುತ್ತಿದ್ದರು. ಅಂದಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಬಿಎಸ್‌ವೈ ಅವರನ್ನು ಕನ್ನಡದ ಮುಖ್ಯಮಂತ್ರಿ ಎಂದಿದ್ದರು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪುರಸಭೆ ಅಧ್ಯಕ್ಷೆ ಶೈಲಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಸಂಚಾಲಕ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಪುರಸಭೆ ಮುಖ್ಯಾಧಿಕಾರಿ ಭರತ್, ಪ್ರಮುಖರಾದ ವಿನಯ್ ಆರಾಧ್ಯ, ರವಿಕುಮಾರ್, ವೀರಣ್ಣ ಗೌಡ, ಬೆಣ್ಣೆ ಪ್ರವೀಣ್, ಚನ್ನವೀರಪ್ಪ, ಎಸ್.ಎಸ್.ರಾಘವೇಂದ್ರ, ಪ್ರಶಾಂತ್, ಪಾಪಯ್ಯ ಇತರರಿದ್ದರು.