ಎಚ್.ಡಿ.ಕೋಟೆಯಲ್ಲಿ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಕಲೆ ಮತ್ತು ಕರಕುಶಲ ತರಬೇತಿ ಕಾರ್ಯಕ್ರಮವನ್ನು ಎಚ್.ಎಸ್. ಗಿರಿಜಾಂಬ ಉದ್ಘಾಟಿಸಿದರು. ಜಿ.ಆರ್. ಮಹೇಶ್, ಬಿ.ಆರ್. ಭವ್ಯಾ, ಗಾಯತ್ರಿ, ಶೈಲೇಂದ್ರಕುಮಾರ್, ಗೀತಾ ಅಯ್ಯಪ್ಪ, ಸಿದ್ದರಾಜು, ಮಹದೇವ, ತ್ರಿಮೂರ್ತಿ, ಜಯಲಲಿತಾ, ನಾಗೇಂದ್ರ ಹೆಬ್ಬಾರ್, ಭರತ್‌ಕುಮಾರ್, ಸಿದ್ದರಾಜು ಎಂ., ನಾಗರಾಜು ಇತರರು ಇದ್ದರು.
- ಕೇಂದ್ರ ಹಾಗೂ ರಾಜ್ಯ ಸರ್ಕಾರ ಬುಡಕಟ್ಟು ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ
- ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು
ಮೈಸೂರು:ಬುಡಕಟ್ಟು ಜನರ ಬದುಕನ್ನು ಹಸನಾಗಿಸಲು ಸರ್ಕಾರ ಹಲವು ಯೋಜನೆ, ತರಬೇತಿಗಳನ್ನು ನಡೆಸುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ ಸಲಹೆ ನೀಡಿದರು.
ಎಚ್.ಡಿ. ಕೋಟೆಯ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಆಯೋಜಿಸಿದ್ದ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಕಲೆ ಮತ್ತು ಕರಕುಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬುಡಕಟ್ಟು ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಬಗ್ಗೆ ತಿಳಿದುಕೊಳ್ಳಬೇಕು. ಈ ಕಲೆ ಮತ್ತು ಕರಕುಶಲ ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಯಾವುದೇ ಸಂದೇಹ ಬಂದರೂ ಅದನ್ನು ಬಗೆಹರಿಸಿಕೊಳ್ಳಿ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಜಿ.ಆರ್. ಮಹೇಶ್ ಮಾತನಾಡಿ, ಜನಸಾಮಾನ್ಯರಲ್ಲಿರುವ ಕಲೆಗಿಂತ ನಿಮ್ಮಲ್ಲಿರುವ ಕಲೆ ಚೆನ್ನಾಗಿದೆ. ಬುಡಕಟ್ಟು ಯುವಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಕಾರ್ಯಾಗಾರದ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಚೇತನ್ ಅವರು ಸೋರೆ ಬುರುಡೆ ಮೇಲೆ ಚಿತ್ರ ಬಿಡಿಸುವ ಬಗ್ಗೆ ತರಬೇತಿ ನೀಡಿದರೆ, ಸಂಪನ್ಮೂಲವ್ಯಕ್ತಿ ಡಾ. ವಿಜಯ್‌ಕುಮಾರ್ ಉದ್ಯಮಶೀಲ ಕೌಶಲದ ಬಗ್ಗೆ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.
ಬುಡಕಟ್ಟು ಸಂಶೋಧನಾ ಸಂಸ್ಥೆಯ ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ, ಸಿಡಿಪಿಒ ಗಾಯತ್ರಿ, ಎಚ್.ಡಿ. ಕೋಟೆ ಲ್ಯಾಂಪ್ಸ್ ಅಧ್ಯಕ್ಷ ಶೈಲೇಂದ್ರಕುಮಾರ್, ಪ್ರಮುಖರಾದ ಗೀತಾ ಅಯ್ಯಪ್ಪ, ಸಿದ್ದರಾಜು, ಮಹದೇವ, ತ್ರಿಮೂರ್ತಿ, ಜಯಲಲಿತಾ, ನಾಗೇಂದ್ರ ಹೆಬ್ಬಾರ್, ಭರತ್‌ಕುಮಾರ್, ಸಿದ್ದರಾಜು ಎಂ., ನಾಗರಾಜು ಇತರರು ಇದ್ದರು.