ನ್ಯೂಸ್

ಗ್ರಾಹಕರ ಅಭಿರುಚಿಗೆ ತಕ್ಕ ಉತ್ಪನ್ನ ಉತ್ಪಾದಿಸಿ, ಖಾಸಗಿ ಜತೆ ಪೈಪೋಟಿ ನಡೆಸಿ: ಸಿಎಂ ಸಲಹೆ

ಬೆಂಗಳೂರು: ಗುಣಮಟ್ಟ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ಸಿದ್ಧಪಡಿಸಿದರೆ ಉತ್ತಮ ಮಾರುಕಟ್ಟೆ ಸಿಗುತ್ತದೆ. ಖಾಸಗಿ ಸಂಸ್ಥೆಗಳ ಜತೆ ನಾವು ಸ್ಪರ್ಧೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಉತ್ಪಾದಿಸಿರುವ 21 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಅವರು, ಖಾಸಗಿಯವರ ಜತೆ ಗೆಲ್ಲಬೇಕು. ಮಾರುಕಟ್ಟೆಯಲ್ಲಿ ಇರಬೇಕು. ಸರ್ಕಾರಿ ಸಂಸ್ಥೆಗಳೂ ಲಾಭದಲ್ಲಿ ನಡೆಯಬೇಕು. ಜನ ಆಸಕ್ತಿಯಿಂದ ಖರೀದಿಸುವ ವಸ್ತು ಉತ್ಪಾದಿಸಬೇಕು ಎಂದು ತಿಳಿಸಿದರು.

107 ವರ್ಷಗಳ ಇತಿಹಾಸ ಹೊಂದಿರುವ ಕೆಎಸ್‌ಡಿಎಲ್ ಈಗಿನ ತಲೆಮಾರಿನ ಯುವಜನರ ನಿರೀಕ್ಷೆಗೆ ತಕ್ಕಂತೆ ಶವರ್ ಜೆಲ್ ಸೇರಿದಂತೆ ಬಗೆಬಗೆಯ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾಗಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇದರ ಜತೆಗೆ ಗುಣಮಟ್ಟಕ್ಕೆ ಆದ್ಯತೆ ಮುಂದುವರಿಯಬೇಕು ಎಂದರು. ಹಿಂದಿನ ಸಾಲಿನಲ್ಲಿ ಸಂಸ್ಥೆಯು 132 ಕೋಟಿ ರೂ. ಲಾಭ ಮಾಡಿತ್ತು. ಎಂ ಬಿ ಪಾಟೀಲರು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮೇಲೆ ಎಂಟು ತಿಂಗಳಲ್ಲಿ ಲಾಭವು 182 ಕೋಟಿ ರೂ.ಗಳಿಗೇರಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಉತ್ಪಾದನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಅವರು ಹಲವು ಮಹತ್ವಾಕಾಂಕ್ಷಿ ಉಪಕ್ರಮಗಳನ್ನು ಕೈಗೊಂಡಿರುವುದು ಸ್ತುತ್ಯರ್ಹ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಕಲಿ ಉತ್ಪನ್ನಗಳ ಮೇಲೆ ನಿಗಾ ಅವಶ್ಯ

ಹೈದರಾಬಾದಿನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರಾಗಿರುವ ಕೆಎಸ್‌ಡಿಎಲ್ ಉತ್ಪನ್ನಗಳು ನಕಲಾಗದಂತೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

3000 ಕೋಟಿ ಗುರಿ

ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಸಚಿವ ಎಂ ಬಿ ಪಾಟೀಲ ಮಾತನಾಡಿ, ‘ಸಂಸ್ಥೆಯ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಚೀಚೆ ಇದೆ. ಇದನ್ನು ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳಾಗುವಂತೆ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಪಾದನೆಯ ಪ್ರಮಾಣವು ಇತ್ತೀಚೆಗೆ ಶೇ.25ರಷ್ಟು ಹೆಚ್ಚಾಗಿದೆ, ಎಂದರು.

ಎಂಟು ತಿಂಗಳಲ್ಲಿ ಸಂಶೋಧನೆ ನಡೆಸಿ ದಾಖಲೆಯ ಕ್ಷಿಪ್ರ ಅವಧಿಯಲ್ಲಿ ಹೊಸ ಉತ್ಪನ್ನಗಳನ್ನು ಹೊರತರಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ತಾಂತ್ರಿಕ ಸಮಾಲೋಚಕ ರಜನೀಕಾಂತ್ ಅವರ ನೆರವು ನಿರ್ಣಾಯಕವಾಗಿದೆ. ಜತೆಗೆ, ಪಾರದರ್ಶಕ ಸಾಬೂನುಗಳು ಮತ್ತು ಸುಗಂಧಭರಿತ ಉತ್ಪನ್ನಗಳ ತಯಾರಿಕೆ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ಸಂಸ್ಥೆಯ ಉತ್ಪನ್ನಗಳ ನಕಲನ್ನು ತಡೆಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಜತೆಗೆ ಅಮೆರಿಕ, ಯೂರೋಪು ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅಂತಾರಾಷ್ಟ್ರೀಯ ವಹಿವಾಟನ್ನು ಸದ್ಯದ 19 ಕೋಟಿ ರೂ.ಗಳಿಂದ 25 ಕೋಟಿ ರೂ.ಗಳಿಗೆ ಈ ವರ್ಷವೇ ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ ಇಡೀ ಭಾರತದಲ್ಲಿ ಸಂಸ್ಥೆಯ ಮಾರುಕಟ್ಟೆ ಜಾಲವನ್ನು ಬೆಳೆಸಲಾಗುವುದು ಎಂದು ವಿವರಿಸಿದರು.

ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್, ತಾಂತ್ರಿಕ ಸಲಹೆಗಾರ ರಜನೀಕಾಂತ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆಎಸ್‌ಡಿಎಲ್ ಆಡಳಿತಾಧಿಕಾರಿ ಗಂಗಪ್ಪ ಉಪಸ್ಥಿತರಿದ್ದರು.