ಸಿಕ್ಕಿಂನಲ್ಲಿ ನಿರಂತರ ಮಳೆ, ಗ್ಯಾಲ್ಶಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ಭೂಕುಸಿತ
ಭೂ ಕುಸಿತದಿಂದ 30 ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಭಯದಲ್ಲಿ ಬದುಕು
ಸೆ.26ರವರೆಗೂ ಮಳೆ ಮುನ್ಸೂಚನೆ, ಎಚ್ಚರಿಕೆಯಿಂದರಿಲು ಸಿಎಂ ಮನವಿ
ಗ್ಯಾಂಗ್ಟಕ್: ಸಿಕ್ಕಿಂನಲ್ಲಿ ನಿರಂತರ ಸುರಿದ ಮಳೆಗೆ ಜನರು ತತ್ತರಿಸಿದ್ದಾರೆ. ವರುಣನ ಅಬ್ಬರದಿಂದಾಗಿ ಯುಕ್ಸಮ್-ತಾಶಿಡಿಂಗ್ ಪ್ರದೇಶಕ್ಕೆ ಸೇರುವ ಗ್ಯಾಲ್ಶಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 30ಕ್ಕೂ ಹೆಚ್ಚು ಮನೆಗಳ ಮೇಲೆ ಮಣ್ಣು, ಕಲ್ಲು ಹಾಗೂ ಭಗ್ನಾವಶೇಷ ಉರುಳಿದ ಹಿನ್ನೆಲೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗುರುವಾರ ಸೆ.24ರಂದು ಭೂ ಕುಸಿತವುಂಟಾಗಿದ್ದು, ಹಲವಾರು ಮನೆಗಳು, ಸರ್ಕಾರಿ ಕ್ವಾರ್ಟರ್ಸ್ಗಳು ನೆಲಸಮಗೊಂಡಿದೆ. ನಿದ್ದೆ ಮಂಪರಿನಲ್ಲಿದ್ದ ಜನರು ಅವಘಡ ಸಂಭವಿಸುತ್ತಿದ್ದಂತೆ ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಗಾಯಗೊಂಡಿರುವ ಬಗ್ಗೆಯೂ ಯಾವುದೇ ಪ್ರಕರಣವಿಲ್ಲ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ನಿವಾಸಿಗಳು ಅಸ್ಥಿರತೆಯಲ್ಲಿ ಬದುಕುವಂತಾಗಿದೆ. ರಸ್ತೆಗಳು, ಮನೆಗಳು ಅಪಾಯದ ಅಂಚಿನಲ್ಲಿರುವ ಕಾರಣ, ಯಾವ ಸಮಯದಲ್ಲಿ ಏನು ಸಂಭವಿಸುತ್ತದೆಯೋ ಎನ್ನುವ ಭೀತಿಯಲ್ಲಿ ಜನರು ಬದುಕುತ್ತಿದ್ದಾರೆ. ಗ್ಯಾಂಗ್ಟಕ್ನ ಜಿಲ್ಲಾ ವಿಪತ್ತು ಪ್ರಾಧಿಕಾರ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸುತ್ತಿದ್ದೆ.
ಭೂಕುಸಿತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಲ್ಲು, ಬಂಡೆ ರಾಶಿ ಮಣ್ಣು, ಮರದ ದಿಂಬಿಗಳು, ಧರೆಗುರುಳಿದ ಬೃಹತ್ ಮರ, ಪ್ರಕೃತಿಯ ಅವಶೇಷಗಳು ಬೆಟ್ಟದ ಮೇಲಿನಿಂದ ಜನವಸತಿ ಪ್ರದೇಶದ ಮೇಲೆ ಹರಿದು ಹೋಗುತ್ತಿರುವುದು, ಮನೆಗಳು ಉರುಳಿರುವ ದೃಶ್ಯಗಳು ವಿಡಿಯೋದಲ್ಲಿ ಇದೆ.
ಸಿಕ್ಕಿಂನ ಸಿಎಂ ಪ್ರೇಮ್ ಸಿಂಗ್ ತಮಾಂಗ್ ಮಾತನಾಡಿ, ಭೂಕುಸಿತದಿಂದಾಗಿ ಸಮಸ್ಯೆಗೆ ಒಳಗಾದ ಸಂತ್ರಸ್ತರಿಗೆ ಸೂಕ್ತ ವಸತಿ ಒದಗಿಸಲಾಗುತ್ತದೆ. ನಿವಾಸಿಗಳ ಸುರಕ್ಷತೆ ಹಾಗೂ ಕ್ಷೇಮ ವಿಚಾರಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿರುತ್ತದೆ. ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸಿ ನಿವಾಸಿಗಳ ಸುರಕ್ಷತೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ನಿರಂತರ ಮಳೆ ಮುಂದುವರೆದಿರುವ ಹಿನ್ನೆಲೆ ಗುಡ್ಡಗಾಡು ಪ್ರದೇಶದಲ್ಲಿ ಜನರು ಎಚ್ಚರಿಕೆಯಿಂದ ವಾಸ ಮಾಡುವಂತೆ ಹಾಗೂ ಅಧಿಕಾರಿಗಳು ನೀಡುವ ಮುನ್ನೆಚ್ಚರಿಕೆಯನ್ನು ಪಾಲನೆ ಮಾಡುವಂತೆ ಜನರಲ್ಲಿ ಸಿಎಂ ಮನವಿ ಮಾಡಿದ್ದಾರೆ.
ಶಾಸಕ ತ್ಶೆರಿಂಗ್ ಭೂಟಿಯಾ ನೇತೃತ್ವದ ನುರಿತ ಎಂಜಿನಿಯರ್ಗಳು ಹಾಗೂ ಅಧಿಕಾರಿಗಳ ತಂಡವು ಲಿಂಗ್ ರಾಕಾ ಹೆದ್ದಾರಿ ಸೇರಿದಂತೆ ಮಣ್ಣು ಕುಸಿದು ಹಾನಿಗೊಳಗಾಗಿರುವ ಹಲವು ಪ್ರದೇಶಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದೆ. ಸದ್ಯ ಗುರುವಾರ ರಾತ್ರಿ ಹಾನಿಗೊಳಗಾದ ಪ್ರದೇಶದಕ್ಕೆ ಜೆಸಿಬಿಗಳನ್ನು ತರಲಾಗಿದೆ. ಸಾರ್ವಜನಿಕ ಮೂಲಸೌಕರ್ಯ ಮರುಸ್ಥಾಪನೆಗೆ ಜಿಲ್ಲಾಡಳಿತ ಶ್ರಮಿಸುತ್ತಿದೆ.
ಸೆ.25 ರಂದು ಮತ್ತು ಸೆಪ್ಟೆಂಬರ್ 26 ರಂದು ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹೀಗಾಗಿ ಇಲ್ಲಿನ ನಿವಾಸಿಗಳಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಬಗ್ಗೆ ಆತಂಕ ಮನೆ ಮಾಡಿದೆ.
ರಿಂಬಿಯಲ್ಲಿ ಪದೇ ಪದೇ ಭೂಕುಸಿತ ಉಂಟಾಗುತ್ತದೆ. ಇದಕ್ಕೆ ಕಾರಣ ನಿರಂತರ ಸುರಿವ ಮಳೆ. ರಿಂಬಿ ಇಳಿಜಾರು, ಗುಡ್ಡಗಾಡು ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನ ಮಳೆ ನೀರು ಮಣ್ಣು ಮತ್ತು ಬಿರುಕು ಬಿಟ್ಟ ಬಂಡೆ ಮಧ್ಯೆ ಶೇಖರಣೆಗೊಂಡು ಒತ್ತಡ ಹೆಚ್ಚಾಗುತ್ತದೆ. ನೀರು ಇಳಿಜಾರನ್ನು ಒಟ್ಟಾಗಿ ಹಿಡಿದುಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಕೊನೆಗೆ ಮಣ್ಣು ಮತ್ತು ಬಂಡೆಗಳು ಕೆಳಮುಖವಾಗಿ ಚಲಿಸುವಂತೆ ಮಾಡುತ್ತದೆ. ಒಮ್ಮೆ ಇಳಿಜಾರು ಈಗಾಗಲೇ ಅಸ್ತವ್ಯಸ್ತಗೊಂಡಿದ್ದರೆ, ಮತ್ತಷ್ಟು ಮಳೆಯು ಹೆಚ್ಚುವರಿ ಚಲನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ, (ಏಜೆನ್ಸೀಸ್).