ನ್ಯೂಸ್

ಸೇನೆಯ 2ನೇ ಅತ್ಯುನ್ನತ ಹುದ್ದೆಗೇರಿದ ಮಾಧುರಿ

ನವದೆಹಲಿ: ಮೇಜರ್ ಜನರಲ್ ಮಾಧುರಿ ಕಾನಿಟ್ಕರ್ ಅವರಿಗೆ ಭಾರತೀಯ ಭೂಸೇನೆಯ ಎರಡನೇ ಅತ್ಯುನ್ನತ ಹುದ್ದೆಯಾದ ಲೆಫ್ಟಿನೆಂಟ್ ಜನರಲ್ ಆಗಿ ಶನಿವಾರ ಬಡ್ತಿ ನೀಡಲಾಗಿದೆ.

37 ವರ್ಷಗಳಿಂದ ಭಾರತೀಯ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧುರಿ, ಈ ಹುದ್ದೆಗೇರಿದ ಮೂರನೇ ಮಹಿಳೆಯಾಗಿದ್ದಾರೆ. ಈ ಉನ್ನತ ಹುದ್ದೆ ಪಡೆದ ಪ್ರಥಮ ಮಕ್ಕಳ ತಜ್ಞೆ ಎಂಬ ಗರಿಮೆಗೂ ಅವರು ಪಾತ್ರರಾಗಿದ್ದಾರೆ.  ಮಾಧುರಿ ಪತಿ ರಾಜೀವ್ ಕೂಡ ಲೆಫ್ಟಿನೆಂಟ್ ಜನರಲ್ ಆಗಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಈ ಹುದ್ದೆಗಳನ್ನು ಪಡೆದ ಮೊದಲ ದಂಪತಿ ಎನ್ನುವ ಹೆಗ್ಗಳಿಕೆಗೆ ಮಾಧುರಿ-ರಾಜೀವ್ ಪಾತ್ರರಾಗಿದ್ದಾರೆ.

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ಮೆಡಿಕಲ್ ಕಾಲೇಜ್​ನ ಮಾಜಿ ಡೀನ್ ಆದ ಮಾಧುರಿ ಅವರನ್ನು ಮೂರೂ ಸೇನೆಗಳ ಮುಖ್ಯಸ್ಥರ (ಸಿಡಿಎಸ್) ಅಧೀನದಲ್ಲಿರುವ ಸಮಗ್ರ ರಕ್ಷಣಾ ಸಿಬ್ಬಂದಿ ಕೇಂದ್ರ ಕಚೇರಿಗೆ ನಿಯೋಜಿಸಲಾಗಿದೆ. ನೌಕಾ ಪಡೆಯಲ್ಲಿದ್ದ ಪುನಿತಾ ಆರೋರಾ ಲೆಫ್ಟಿನೆಂಟ್ ಜನರಲ್ ಆದ ಪ್ರಥಮ ಮಹಿಳಾ ಅಧಿಕಾರಿ. ಆನಂತರ, ವಾಯು ಪಡೆಯಲ್ಲಿದ್ದ ಪದ್ಮಾವತಿ ಬಂಡೋಪಾಧ್ಯಾಯ ಈ ಹುದ್ದೆ ಗಳಿಸಿದ ಎರಡನೇ ಮಹಿಳೆಯಾಗಿದ್ದಾರೆ.

ಭೂಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೂ ಪರ್ಮನೆಂಟ್ ಕಮಿಷನ್ (ಪಿಸಿ) ಹುದ್ದೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿ ಅದನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.