ನವದೆಹಲಿ: ಕೇಂದ್ರ ಸರ್ಕಾರ EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಲು ಪರಿಗಣಿಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಮನೆ ಖರೀದಿ, ಮದುವೆ ಅಥವಾ ಶಿಕ್ಷಣದಂತಹ ಕಾರಣಗಳಿಗಾಗಿ ಹಣವನ್ನು ಹಿಂಪಡೆಯುವುದನ್ನು ಮತ್ತಷ್ಟು ಸುಲಭಗೊಳಿಸಲು ಸರ್ಕಾರ ಯೋಜಿಸಿದೆ ಎಂದು ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳು ಹಂಚಿಕೊಂಡಿರು ಎಂದು ಮನಿ ಕಂಟ್ರೋಲ್ ವರದಿ ಉಲ್ಲೇಖಿಸಿದೆ.
ಸದಸ್ಯರು ತಮ್ಮ ಹಣಕಾಸಿನ ಅಗತ್ಯಗಳ ಆಧಾರದ ಮೇಲೆ ತಮ್ಮ ನಿವೃತ್ತಿ ನಿಧಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಯಾವುದೇ ನಿಗದಿತ ಸಮಯವನ್ನು ನೀಡಿಲ್ಲವಾದರೂ ಖಂಡಿತ ಈ ಬದಲಾವಣೆಗಳನ್ನು ಒಂದು ವರ್ಷದೊಳಗೆ ಜಾರಿಗೆ ತರಬಹುದು ಎಂದಿದ್ದಾರೆ.
ಪ್ರಸ್ತುತ, ಇಪಿಎಫ್‌ಒ ಸದಸ್ಯರು 58 ನೇ ವಯಸ್ಸಿನಲ್ಲಿ ಅಥವಾ ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದರೆ ಮಾತ್ರ ತಮ್ಮ ಪೂರ್ಣ ಹಣವನ್ನು ಹಿಂಪಡೆಯಬಹುದು. ಮನೆ ಖರೀದಿ ಅಥವಾ ನಿರ್ಮಾಣಕ್ಕಾಗಿ ಶೇಕಡಾ 90 ರಷ್ಟು ಹಣವನ್ನು ಹಿಂಪಡೆಯಬಹುದು. ಆಸ್ತಿಯು ಸದಸ್ಯರು, ಅವರ ಸಂಗಾತಿ ಅಥವಾ ಜಂಟಿಯಾಗಿ ಹೆಸರಿನಲ್ಲಿರಬೇಕು. ಅಲ್ಲದೆ, 3 ವರ್ಷಗಳ ಸೇವಾ ಅನುಭವದ ಅಗತ್ಯವಿದೆ.
ಸರ್ಕಾರ ಶೀಘ್ರದಲ್ಲೇ ಇಪಿಎಫ್‌ಒ ಸದಸ್ಯರು ಪ್ರತಿ 10 ವರ್ಷಗಳಿಗೊಮ್ಮೆ ಪೂರ್ಣ ಅಥವಾ ಭಾಗಶಃ ಉಳಿತಾಯವನ್ನು ಹಿಂಪಡೆಯಲು ಅವಕಾಶ ನೀಡಬಹುದು. ಇದು ಸದಸ್ಯರಿಗೆ ತಮ್ಮ ಸ್ವಂತ ಹಣದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಮತ್ತು ನಿಜವಾಗಿಯೂ ಅಗತ್ಯವಿದ್ದಾಗ ಅದನ್ನು ಬಳಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)