ಲದ್ದಿಹುಳು ಬಾಧೆಯಿಂದ ಹಾಳಾದ ಮೆಕ್ಕೆಜೋಳದ ಬೆಳೆ. 
ನ್ಯೂಸ್

ಮಕ್ಕೆಜೋಳಕ್ಕೆ ಲದ್ದಿಹುಳು ಬಾಧೆ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದಲೇ ಬಹುಪಾಲು ಮೆಕ್ಕೆಜೋಳ ಬೆಳೆ ನಾಶವಾಗಿದೆ. ಆದರೆ ಈಗ ಅಳಿದುಳಿದ ಬೆಳೆಗೆ ನೂತನ ಪ್ರಭೇದದ ಲದ್ದಿಹುಳು ಕಾಟ ಆರಂಭವಾಗಿದೆ. ಫಸಲನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಇದು ಹಳೆಯ ಪ್ರಭೇದದ ಹುಳುವಿಗಿಂತ ವೇಗವಾಗಿ ಮೆಕ್ಕೆಜೋಳದ ಸುಳಿಯನ್ನು ನಾಶಮಾಡುತ್ತದೆ. ತಾಲೂಕಿನ ಕಸಬಾ, ತಾಳಗುಂದ, ಉಡುಗಣಿ, ಹೊಸೂರು, ಅಂಜನಾಪುರ ಹೋಬಳಿಗಳಲ್ಲಿ ಹುಳುವಿನ ಬಾಧೆ ವ್ಯಾಪಕವಾಗಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಮುಸುಕಿನ ಜೋಳದ ಬೆಳೆಗೆ ಮಳೆ ಅಭಾವದ ಜತೆಗೆ ವಾತಾವರಣದಲ್ಲಿ ಹೆಚ್ಚಿನ ಉಷ್ಣಾಂಶ ಇರುವುದರಿಂದ, ನೂತನ ಪ್ರಭೇದದ ಲದ್ದಿಹುಳು ಬಾಧೆ ತೀವ್ರವಾಗಿದೆ.
ಇವುಗಳು ಹಿಂಡು ಹಿಂಡಾಗಿ ಬರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಬರಗಾಲದಿಂದ ಸಾವಿರಾರು ಎಕರೆ ಮೆಕ್ಕೆಜೋಳ ಹಾಳಾಗಿ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇನ್ನೊಂದೆಡೆ ನೀರಾವರಿ ಯೋಜನೆಯಿಂದ ತಾಲೂಕಿನ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲು ವಿದ್ಯುತ್ ಕೊರತೆ ಇದೆ. ಆದರೂ ನಿರಂತರವಾಗಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ. ಕೆರೆಗಳು ತುಂಬಿದರೆ ಬೋರ್‌ವೆಲ್ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಅಳಿದುಳಿದ ಬೆಳೆಯಾದರೂ ಕೈ ಸೇರುತ್ತವೆ ಎನ್ನುವ ನಿರೀಕ್ಷೆಯೂ ಹುಸಿಯಾಗುವ ಸಾಧ್ಯತೆಯಿದೆ.
ಮೊಟ್ಟೆಯಿಂದ ಮರಿಹುಳುಗಳು ಹೊರಗೆ ಬಂದು ಮೆಕ್ಕೆಜೋಳದ ಸುಳಿಯ ಒಳಗೆ ಹೋಗಿ ಮೃದುವಾದ ಭಾಗವನ್ನು ತಿನ್ನುತ್ತವೆ. ನಂತರ ಎಲೆಗಳು ಹೊರಗಡೆ ಬಂದಾಗ ಅವುಗಳ ಮೇಲೆ ಕೆರೆದು ತಿಂದ ಬಿಳಿಯ ಬಣ್ಣದ ಪಟ್ಟಿಗಳನ್ನು ಕಾಣಬಹುದು. ನಂತರ ದಿನಗಳಲ್ಲಿ ಮರಿಹುಳು ದೊಡ್ಡವಾದಾಗ ಹಿಕ್ಕೆಗಳನ್ನು ಗರಿ ಮತ್ತು ಸುಳಿಯಲ್ಲಿ ಬಿಡುತ್ತವೆ. ಒಂದು ಹೊಲದಲ್ಲಿ ನೂತನ ಪ್ರಭೇದ ಲದ್ದಿಹುಳು ಕಂಡಾಕ್ಷಣ ಅಕ್ಕಪಕ್ಕದ ಹೊಲದವರು ಮುಂಜಾಗ್ರತಾ ಕ್ರಮ ಕೈಗೊಂಡರೆ ತಕ್ಷಣ ಹತೋಟಿಗೆ ತರಬಹುದು ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ.
ಬಾಧೆ ನಿಯಂತ್ರಣ ಹೇಗೆ?: ನೂತನ ಪ್ರಭೇದದ ಲದ್ದಿಹುಳು ಬಾಧೆ ಕಂಡುಬಂದರೆ ಕೃಷಿ ಅಧಿಕಾರಿಗಳ ಸಲಹೆ, ಸೂಚನೆ, ಮಾರ್ಗದರ್ಶನದ ಮೇರೆಗೆ ಕ್ರಮ ಕೈಗೊಳ್ಳಬೇಕು. ಕೀಟ ಬಾಧೆ ಕಡಿಮೆ ಇದ್ದಾಗ ಅಥವಾ ಮರಿಹುಳುಗಳ ನಿರ್ವಹಣೆಗೆ ಬೇವಿನ ಮೂಲದ ಕೀಟನಾಶಕ ಅಜಾಡಿರೆಕ್ಟಿನ್ ಶೇ.5 ಇಸಿ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು. ಕೀಟದ ತ್ರೀವತೆ ಹೆಚ್ಚಾದಲ್ಲಿ ಕೀಟನಾಶಕ ಬಳಕೆ ಮಾಡಬೇಕು. ಹುಳುಗಳನ್ನು ಹತೋಟಿಯಲ್ಲಿಡಲು ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್‌ಜಿ ಅನ್ನು 0.4 ಗ್ರಾಂ ಅಥವಾ ಕ್ಲೊರಾಂಟ್ರನಿಲಿಪ್ರೊಲ್ 18.5 ಎಸ್‌ಸಿ ಅನ್ನು 0.4 ಮಿ.ಲೀ ಅಥವಾ ಥಯೋಮೆಥಾಕ್ಸಾಮ್ ಶೇ.12.6+ ಲ್ಯಾಮ್ಡಾಸೈಹ್ಯಾಲೋಥ್ರಿ ಶೇ. 9.5 ಝೆಡ್‌ಸಿ ಅನ್ನು 0.5 ಮಿ.ಲೀ. ಅಥವಾ ಸ್ಪೈನ್ ಟೋರಮ್ 11.7 ಎಸ್‌ಸಿ ಅನ್ನು 0.5 ಮಿ.ಲೀ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು .ವಿಷ ಪ್ರಾಷನದ ಬಳಕೆ 1 ಎಕರೆಗೆ 10ರಿಂದ 15 ಕೆ.ಜಿ ಭತ್ತದ ತೌಡು (ಬೂಸ), 2 ಕೆ.ಜಿ ಬೆಲ್ಲವನ್ನು 4-5 ಲೀಟರ್ ನೀರಿನಲ್ಲಿ ನೆನೆಸಿ ರಾತ್ರಿ ಕೊಳೆಯಲು ಬಿಟ್ಟು ಮಾರನೇ ದಿನ ಸಂಜೆ ಸಮಯದಲ್ಲಿ ಅದಕ್ಕೆ ಥಯೋಡಿಕಾರ್ಬ್ (100 ಗ್ರಾಂ) ಅಥವಾ ಮೊನೋಕ್ರೊಟೊಫಾಸ್ (250 ಮಿ.ಲೀ.) ಅನ್ನು ಬೆರೆಸಿ ಒಂದು ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಉದುರಿಸುವುದು ಅಥವಾ ಸಣ್ಣ ಉಂಡೆಗಳನ್ನು ಮಾಡಿ ಬೆಳೆಯ ಸಾಲುಗಳ ಮಧ್ಯೆ ಹಾಕಬೇಕು. ಕೀಟನಾಶಕಗಳನ್ನು ಸಂಜೆ ಹೊತ್ತಿನಲ್ಲಿಯೇ ಎಲೆಯ ಸುಳಿಗಳು ಸಂಪೂರ್ಣ ನೆನೆಯುವಂತೆ ಸಿಂಪಡಿಸಬೇಕು. ಕೀಟನಾಶಕಗಳ ಸಿಂಪಡಣೆ ಅಥವಾ ವಿಷಪ್ರಾಷನದ ಬಳಕೆ ಮಾಡಿದಾಗ ಅಂತಹ ಜಮೀನಿನಲ್ಲಿ ಜಾನುವಾರುಗಳು ಮೇಯದಂತೆ ಎಚ್ಚರವಹಿಸಬೇಕು.