ಚಿಕ್ಕಮಗಳೂರು: ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಪ್ರತಿದಿನವೂ ಪೂಜೆ, ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ತಿಳಿಸಿದರು.
ತಾಲೂಕಿನ ಮರ್ಲೆ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಮುಳ್ಳೇಶ್ವರಸ್ವಾಮಿ ಮತ್ತು ತುಗ್ಗಲಮರದಮ್ಮ ದೇವಿಯ ನೂತನ ದೇವಾಲಯ ಉದ್ಘಾಟನೆ, ಕಲಶ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿದರು.
ಹೊಸಳ್ಳಿ ನೂತನ ದೇವಾಲಯಕ್ಕೆ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರ ಒಕ್ಕಲಿರುವ ಹಿನ್ನೆಲೆಯಲ್ಲಿ ಅತ್ಯಂತ ವಿಭೃಂಭಣೆಯಿಂದ ದೇವಾಲಯ ಲೋಕಾರ್ಪಣೆಗೊಂಡಿದೆ. ಹೀಗಾಗಿ ಗ್ರಾಮಸ್ಥರು ದೇವಾಲಯ ನಿರ್ಮಿಸಿದರೆ ಸಾಲದು. ಶುಚಿತ್ವ ಕಾಪಾಡುವ ಜತೆಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ದೇವಾಲಯವು ಬಹುತೇಕ ಪೂರ್ಣಗೊಂಡಿದೆ. ಇನ್ನಿತರೆ ಬಾಕಿಯಿರುವ ಕಾಮಗಾರಿಗಳಿಗೆ ಶಾಸಕಿ ನಯನಾ ಮೋಟಮ್ಮ 2.5 ಲಕ್ಷ ರೂ. ಮೀಸಲಿರಿಸಿದ್ದು ಸಮರ್ಪಕವಾಗಿ ಅನುದಾನವನ್ನು ಬಳಸಿಕೊಂಡು ದೇವಾಲಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಕಳೆದ ಎರಡು ದಿನಗಳಿಂದ ದೇವಾಲಯ ಪೂಜಾ ಕೈಂಕರ್ಯಗಳು ಗ್ರಾಮದಲ್ಲಿ ನಡೆಯುತ್ತಿದ್ದು ಕೊನೆಯ ದಿನವಾದ ಇಂದು ನೂರಾರು ಸಂಖ್ಯೆಯಲ್ಲಿ ಭಕ್ತರ ಸಮ್ಮುಖದಲ್ಲಿ ಅನಾವರಣಗೊಳ್ಳುತ್ತಿರುವುದು ಖುಷಿಯ ಸಂಗತಿ ಎಂದರು.
ಮಾನವ ಕೆಲವು ವೈಯಕ್ತಿಕ ಅಥವಾ ವ್ಯಾವಹಾರಿಕ ಸಮಸ್ಯೆಯಿಂದ ಬಳಲುತ್ತಿದ್ದು ದೇವಾಲಯಗಳಲ್ಲಿ ತೆರಳಿ ಪ್ರಾರ್ಥನೆ ಹಾಗೂ ಪೂಜೆಯಲ್ಲಿ ತೊಡಗಿಸಿಕೊಂಡರೆ ಸಮಸ್ಯೆಯಿಂದ ಹೊರಬರುವ ಜತೆಗೆ ಮನಸ್ಸಿನಲ್ಲಿರುವ ಕಲ್ಮಶವು ಮರೆಯಾಗಲಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯೆ ರೂಪಾ ಚಿಕ್ಕೇಗೌಡ ಮಾತನಾಡಿದರು. ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ಎಂ.ವಿಜಯ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಎಂ.ಕೆ.ಮಂಜುನಾಥ ಶೆಟ್ಟಿ, ಕೆ.ಎಸ್.ಪ್ರಕಾಶ್, ಸದಸ್ಯರಾದ ಹೂವಮ್ಮ, ಮೊಗಣ್ಣ, ಭಾಗ್ಯಾ ಮಲ್ಲೇಶ್, ಚಂದ್ರಪ್ಪ, ಬಸವರಾಜ್, ಗ್ರಾಮಸ್ಥರಾದ ಚಿಕ್ಕೇಗೌಡ, ಬೀರೇಗೌಡ, ಸಂತೋಷ್, ಅರ್ಚಕರಾದ ಶಾಂತಾ ಮಲ್ಲಯ್ಯ, ಉಮೇಶ್, ಕುಮಾರಸ್ವಾಮಿ ಇತರರಿದ್ದರು.