ಶಿಕಾರಿಪುರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಶಾಸಕ ಬಿ.ವೈ.ವಿಜಯೇಂದ್ರ ಎಲ್ಇಡಿ ಟಿವಿ ವಿತರಿಸಿದರು. ಸುನಂದಾ ಮಂಜುನಾಥ್, ಪಾಲಾಕ್ಷಪ್ಪ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಸುನೀತಾ ಮೂಡೇರ್ ಇತರರಿದ್ದರು.  
ನ್ಯೂಸ್

ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿ

ಶಿಕಾರಿಪುರ: ಅಂಗನವಾಡಿ ಕೇಂದ್ರಗಳು ನಮ್ಮ ಮಕ್ಕಳ ಮೊದಲ ವಿದ್ಯಾಕೇಂದ್ರಗಳು. ಶಿಕ್ಷಕಿಯರ ಮತ್ತು ಸಹಾಯಕಿಯರ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿ ವಿತರಿಸಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗಿದೆ. ಸುರಕ್ಷಿತ ಕಟ್ಟಡದಲ್ಲಿ ಮಾತ್ರ ಅಂಗನವಾಡಿಗಳನ್ನು ನಡೆಸಿ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಸಾಂಕ್ರಾಮಿಕ ಕಾಯಿಲೆಗಳಿಂದ ದೂರ ಇರಬಹುದು ಎಂದು ಸಲಹೆ ನೀಡಿದರು.

ಈ ಯೋಜನೆಯಡಿ ಎಲ್ಇಡಿ ಟಿವಿ, ಶುದ್ಧ ಕುಡಿಯುವ ನೀರಿನ ಘಟಕ, ಮಳೆನೀರು ಸಂಗ್ರಹ, ನ್ಯೂಟ್ರಿ ಗಾರ್ಡನ್ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಮೊದಲ ಹಂತವಾಗಿ ಶಿಕಾರಿಪುರದ ಒಟ್ಟು 313 ಅಂಗನವಾಡಿ ಕೇಂದ್ರಗಳ ಪೈಕಿ 149 ಕೇಂದ್ರಗಳಿಗೆ ಟಿವಿ ವಿತರಣೆಯಾಗಿದೆ. ಉಳಿದವುಗಳಿಗೆ ಶೀಘ್ರ ಸರಬರಾಜು ಮಾಡಲಾಗುವುದು. ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆಯರ 8 ಹುದ್ದೆ ಹಾಗೂ 51 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ಭಾಗ್ಯಲಕ್ಷ್ಮಿ ಯೋಜನೆಯಡಿ ಶಿಕಾರಿಪುರ ತಾಲೂಕಿನ 1483 ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ. ಉಳಿದೆಲ್ಲ ಮೆಚ್ಯೂರಿಟಿ ಹೊಂದಿರುವ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಅಂಗನವಾಡಿಗಳು ರಾಜ್ಯದಲ್ಲಿಯೇ ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಶಕ್ತಿ ಮೀರಿ ಶ್ರಮಿಸಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಇಒ ಎನ್.ಜಿ.ನಾಗರಾಜ್, ಸಿಡಿಪಿಒ ದೇನ್ಯಾನಾಯಕ್, ಎಸಿಡಿಪಿಒ ಸುನೀತಾ ಮೂಡೇರ್, ಸಂರಕ್ಷಣಾಧಿಕಾರಿ ರತ್ನಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಉಪಸ್ಥಿತರಿದ್ದರು.