ನವದೆಹಲಿ: ಸದ್ಯ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋನಿಯಾ ಅವರ ಇಡಿ ವಿಚಾರಣೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಅಲ್ಲಲ್ಲಿ ಪ್ರತಿಭಟನೆ ಕೂಡ ಕೈಗೊಂಡಿದೆ. ಈ ನಡುವೆ ಯಾವುದಕ್ಕೂ ಹೆದರಲ್ಲ ಎಂದಿದ್ದ ಸೋನಿಯಾ ಅವರ ಈ ಹಿಂದಿನ ವಿಡಿಯೋವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.
ಇದೇ ವಿಡಿಯೋ ಈಗ ನೆಟ್ಟಿಗರ ಹಂಚಿಕೊಳ್ಳುವ ಮೂಲಕ ಯಾರಿಗೂ ಹೆದರದ ಕಾಂಗ್ರೆಸ್ ಇಂದು ಇಡಿ ಮುಂದೆ ತಲೆಬಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ತಮಿಳುನಾಡು ಭೇಟಿ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ವೇಳೆ ಸೋನಿಯಾ ಗಾಂಧಿ ಅವರು ನಾನು ಇಂದಿರಾಗಾಂಧಿ ಅವರ ಸೊಸೆ, ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ. ಈ ವೇಳೆ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಹಾಗೂ ಕಾಂಗ್ರೆಸ್ ಮುಖಂಡ ವೇಣುಗೋಪಾಲ್ ಕೂಡ ಈ ವಿಡಿಯೋದಲ್ಲಿ ಇದ್ದಾರೆ.
ಹಲವು ಬಾರಿ ವಿಚಾರಣೆಗೆ ಕರೆದಿದ್ದರೂ, ಗೈರಾಗಿದ್ದ ಸೋನಿಯಾ ಗಾಂಧಿ ಅವರು ಗುರುವಾರ ಇಡಿ ಮುಂದೆ ಹಾಜರಾಗಿದ್ದರು. ಇದೇ ಪ್ರಕರಣದಲ್ಲಿ ಹಲವು ಬಾರಿ ರಾಹುಲ್ ಗಾಂಧಿ ಅವರ ವಿಚಾರಣೆ ಕೂಡ ನಡೆಸಲಾಗಿದೆ. (ಏಜೆನ್ಸೀಸ್)