ರಾಜ್ಯ ಮಟ್ಟದ ಸಂಸ್ಕೃತ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಟಿ.ವಿ.ನರಸಿಂಹಮೂರ್ತಿ, ಡಾ. ಯೋಗೇಂದ್ರ, ಮತ್ತೂರು ಶ್ರೀನಿಧಿ, ಅ.ನಾ.ವಿಜಯೇಂದ್ರ ರಾವ್ ಇತರರಿದ್ದರು. 
ನ್ಯೂಸ್

ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಮಹೇತಾ ಧ್ರುವ ಪ್ರಥಮ

ಶಿವಮೊಗ್ಗ: ನಗರದ ಬಿ.ಬಿ ರಸ್ತೆಯ ಸಂಸ್ಕೃತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ 35ನೇ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಶೃಂಗೇರಿಯ ರಾಜೀವ ಗಾಂಧಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ಮಹೇತಾ ಧ್ರುವ ಪ್ರಥಮ ಸ್ಥಾನ ಪಡೆದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥ ನೀಡಲಾಗುವ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು.

ಭಾರತಸ್ಯ ಪರಮವೈಭವಸ್ಥಿತೇ: ಪರಿಕಲ್ಪನಾನಿ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಸಂಸ್ಕೃತ ಕಾಲೇಜುಗಳು, ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆದಿಚುಂಚನಗಿರಿ ಕಾಲಭೈರವೇಶ್ವರ ವೇದ ಆಗಮ ಸಂಸ್ಕೃತ ಪಾಠಶಾಲೆಯ ಎನ್.ಬಿ.ಯೋಗೇಶ್ ಎರಡನೇ ಸ್ಥಾನ ಪಡೆದು ಸೀತಮ್ಮ ಹಾಗೂ ವಿದ್ವಾನ್ ವೆಂಕಟರಮಣ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ, ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯದ ಆರ್.ಸೋಮಶೇಖರ್ ಮೂರನೇ ಸ್ಥಾನ ಪಡೆದು ಅ.ನಾ.ಮಾಧವ ರಾವ್ ಸ್ಮರಣಾರ್ಥ ಪ್ರಶಸ್ತಿ ಹಾಗೂ ಶೃಂಗೇರಿಯ ರಾಜೀವ ಗಾಂಧಿ ಸಂಸ್ಕೃತ ಕಾಲೇಜಿನ ಋಷಿ 4ನೇ ಸ್ಥಾನ ಪಡೆದು ಕರಂಬಳ್ಳಿ ಕೃಷ್ಣಶೆಟ್ಟಿ ಪ್ರಾಯೋಜಕತ್ವ ಪ್ರಶಸ್ತಿ ಪಡೆದರು.

ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ ವಿತರಿಸಿದರು. ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಉಪಾಧ್ಯಕ್ಷ ಮತ್ತೂರು ಶ್ರೀನಿಧಿ, ಸಂಸ್ಕೃತ ಭಾರತಿ ಶಿವಮೊಗ್ಗ ವಿಭಾಗ ಸಂಯೋಜಕ ಜಿ.ಎಂ.ಗುರುಮೂರ್ತಿ, ತೀರ್ಥಹಳ್ಳಿ ಸಂಯೋಜಕ ಕರಂಬಳ್ಳಿ ಕೃಷ್ಣಶೆಟ್ಟಿ, ನಿರ್ದೇಶಕ ನಾಗರಾಜ, ಎನ್.ಎಸ್.ರವೀಂದ್ರ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಬೆಂಗಳೂರಿನ ನವೀನ್ ಭಟ್, ಶಿವಮೊಗ್ಗದ ಮಹೀಪತಿ ಜೋಯಿಸ್, ಯಶೋಮತಿ ಹಾಗೂ ಸಂಸ್ಕೃತ ಭಾರತಿ ಕರ್ನಾಟಕ ಪ್ರಾಂತದ ಹಿರಿಯ ಸದಸ್ಯ ರಾಮಕೃಷ್ಣ ತದ್ದಲಸೆ ಕಾರ್ಯನಿರ್ವಹಿಸಿದರು.