ನ್ಯೂಸ್

ರಾಜ್ಯದಲ್ಲಿ ಸೌಲಭ್ಯ ವಂಚಿತ ಮಾಹೇಶ್ವರಿ ಸಮುದಾಯ; ಜಾತಿ ಪಟ್ಟಿಗೆ ಸೇರಿಸಿ, ಭಾಷಾ ಅಲ್ಪಸಂಖ್ಯಾತ ಸಮುದಾಯವೆಂದು ಗುರುತಿಸಲು ಸರ್ಕಾರಕ್ಕೆ ಮೊರೆ

ಬೆಂಗಳೂರು: ರಾಜ್ಯದಲ್ಲಿ ನೆಲೆಸಿರುವ ‘ಮಾಹೇಶ್ವರಿ’ ಸಮುದಾಯವನ್ನು ಅಧಿಕೃತ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗೋವಾ ಪ್ರದೇಶ ಮಾಹೇಶ್ವರಿ ಸಭಾ ಒತ್ತಾಯಿಸಿದೆ. ರಾಜಸ್ಥಾನ ಮೂಲದವರಾದರೂ ನೂರಾರು ವರ್ಷಗಳಿಂದ ರಾಜ್ಯದಲ್ಲಿ ವಾಸಿಸುತ್ತಿದ್ದು, ಜಾತಿಯನ್ನು ಗುರುತಿಸದ ಪರಿಣಾಮ ಸಾಮಾಜಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಮಾಹೇಶ್ವರಿ ಸಭಾ ಪ್ರದೇಶ ಅಧ್ಯಕ್ಷ ಬ್ರಿಜ್​ವೋಹನ್ ಭೂತಡಾ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ವಿಸõತ ಮನವಿಪತ್ರ ಸಲ್ಲಿಸಿದ್ದು, ಜಾತಿ ಪಟ್ಟಿಗೆ ಸೇರಿಸುವ ಜತೆಗೆ ಭಾಷಾ ಅಲ್ಪಸಂಖ್ಯಾತ ಸಮುದಾಯವೆಂದು ದಾಖಲೆಯಲ್ಲಿ ನಮೂದಿಸಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ಕೋರಿದ್ದಾರೆ. ಜೀವನ ನಿರ್ವಹಣೆಗೆ ಸಣ್ಣ, ಪುಟ್ಟ ವ್ಯಾಪಾರ ವೃತ್ತಿ ಅವಲಂಬಿಸಿದೆ. ಶಿವನ ಭಕ್ತರಾಗಿ ಮಾಹೇಶ್ವರಿ ಸಮುದಾಯ ಗುರುತಿಸಿಕೊಂಡಿದ್ದು, ಶಾಂತಿ, ಸಹಬಾಳ್ವೆಯಿಂದ ರಾಜ್ಯದ ಜನರ ಜತೆಗೆ ಹಾಸುಹೊಕ್ಕಾಗಿದೆ. ಮಾಹೇಶ್ವರಿ ಸಮುದಾಯದ 2,600 ಕುಟುಂಬಗಳು ಹಾಗೂ 14,500ಕ್ಕಿಂತ ಹೆಚ್ಚಿನ ಜನಸಂಖ್ಯಾ ಬಲಹೊಂದಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹರಡಿದೆ. ರಾಜ್ಯದ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆ ನೀಡಿದೆ. ಬಡವರು ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿದ್ದು, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದ ಕಾರಣ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟಾಗಿದೆ ಎಂದು ಬ್ರಿಜ್​ವೋಹನ್ ಭೂತಡಾ ನಿವೇದಿಸಿಕೊಂಡಿದ್ದಾರೆ.

ಕಾಂತರಾಜ್ ವರದಿಯಲ್ಲಿ ನಮೂದು: ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್.ಕಾಂತರಾಜ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆದಿತ್ತು. ಈ ಸಂದರ್ಭದಲ್ಲಿ ಸಮುದಾಯದವರು ‘ಮಾಹೇಶ್ವರಿ’ ಜಾತಿ ಎಂದು ನಮೂದಿಸಿದ್ದು, ಇದುವರೆಗೂ ಸರ್ಕಾರದ ಅಧಿಕೃತ ಜಾತಿ ಪಟ್ಟಿಯಲ್ಲಿ ‘ಮಾಹೇಶ್ವರಿ’ ಸಮುದಾಯವನ್ನು ಗುರುತಿಸಿಲ್ಲ.

ಸಮುದಾಯಕ್ಕಿದೆ 96 ಉಪ ನಾಮ: ಮಾಹೇಶ್ವರಿ ಅಥವಾ ಮಹೇಶ್ವರಿ ಎಂದು ಕರೆಯಲ್ಪಡುವ ಈ ಸಮುದಾಯವು ರಾಜ್ಯದಲ್ಲಿ ನೂರಾರು ವರ್ಷಗಳಿಂದ ನೆಲೆಸಿದೆ. ಬಿರ್ಲಾ, ಬಜಾಜ್, ಭೂತಡಾ, ಬಂಗದ, ಬಿಯಾನಿ, ಧೂತ್, ಮಂಡೋರ, ದಮನಿ, ಕಹಲ್ಯ, ಭನ್ಸಾಲಿ, ತವ್ರಿ ಸೇರಿ 96 ಉಪನಾಮಗಳು ಈ ಸಮುದಾಯಕ್ಕಿದೆ.

ಈಡೇರದ ಭರವಸೆ: ಮಾಹೇಶ್ವರಿ ಸಮುದಾಯದ ಮನವಿ ಮೇರೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎನ್.ಶಂಕರಪ್ಪ ಮತ್ತವರ ತಂಡವು 2012ರ ಸೆಪ್ಟೆಂಬರ್​ನಲ್ಲಿ ರಾಜ್ಯ ಪ್ರವಾಸ ಕೈಗೊಂಡು, ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಿದ್ಧಪಡಿಸಿದ್ದರು. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ‘ಮಾಹೇಶ್ವರಿ’ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಹೊಸ ಸೇರ್ಪಡೆಗೆ ಆಯೋಗದಿಂದ ಶಿಫಾರಸು ಬಂದಿದ್ದು, ಸೂಕ್ತ ಕ್ರಮಕೈಗೊಳ್ಳಲಾಗುವುದು ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ.

ಪ್ರಮುಖ ಬೇಡಿಕೆಗಳು

  • ಸರ್ವಾಂಗೀಣ ಅಭಿವೃದ್ಧಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸಮುದಾಯವನ್ನು ಸರ್ಕಾರದ ಜಾತಿ ಪಟ್ಟಿಗೆ ಸೇರಿಸಿ ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕೆ ಅನುಕೂಲ ಕಲ್ಪಿಸಬೇಕು.
  • ಜಾತಿ ಗಣತಿಯಲ್ಲಿ ‘ಮಾಹೇಶ್ವರಿ’ ಸಮುದಾಯದ ಹೆಸರು ನಮೂದಿಸಬೇಕು.
  • ಮಾಹೇಶ್ವರಿ ಸಮುದಾಯವನ್ನು ಭಾಷಾ ಅಲ್ಪಸಂಖ್ಯಾತ ಸಮುದಾಯವೆಂದು ಸರ್ಕಾರದ ದಾಖಲೆಯಲ್ಲಿ ನಮೂದಿಸಬೇಕು.

ಮುಖ್ಯಮಂತ್ರಿ ಬೊಮ್ಮಾಯಿಗೆ ಡಾ.ವಿಜಯ ಸಂಕೇಶ್ವರ ಪತ್ರ

ಮಾಹೇಶ್ವರಿ ಸಮುದಾಯವನ್ನು ಸರ್ಕಾರದ ಜಾತಿ ಪಟ್ಟಿಗೆ ಸೇರಿಸಬೇಕು. ಭಾಷಾ ಅಲ್ಪಸಂಖ್ಯಾತ ಸಮುದಾಯವೆಂದು ಘೋಷಿಸಿ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಹುಬ್ಬಳ್ಳಿಯ ಕರ್ನಾಟಕ ಗೋವಾ ಪ್ರದೇಶ ಮಾಹೇಶ್ವರಿ ಸಭಾದ ಅಧ್ಯಕ್ಷರು ಸಲ್ಲಿಸಿರುವ ಮನವಿಯತ್ತ ಗಮನಸೆಳೆದಿದ್ದಾರೆ. ಸರ್ಕಾರದ ಜಾತಿ ಪಟ್ಟಿಯಲ್ಲಿ ಸೇರಿಸದ ಕಾರಣ ಅಲ್ಪಸಂಖ್ಯಾತ ಮಾಹೇಶ್ವರಿ ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಅಲ್ಲದೆ, ಸರ್ಕಾರದ ಯೋಜನೆಗಳಿಗೆ ಅರ್ಜಿ, ಶಾಲೆ-ಕಾಲೇಜು ಸೇರಿ ಮತ್ತಿತರ ಉದ್ದೇಶಗಳಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲವೆಂದು ಡಾ.ವಿಜಯ ಸಂಕೇಶ್ವರ ಕಳವಳ ವ್ಯಕ್ತಪಡಿಸಿದ್ದಾರೆ.