ನ್ಯೂಸ್

ಅವಹೇಳನಕಾರಿ ಹೇಳಿಕೆ ಆರೋಪ; ಮಹೇಶ್‌ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು| Mahesh Shetty Timarodi

ಉಡುಪಿ: ಬಿಜಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಆಕ್ಷಪಾರ್ಹ ಹೇಳಿಕೆ ನೀಡಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ನೀಡಿದೆ.

ಅನೇಕ ಬಾರಿ ನೋಟಿಸ್​ ನೀಡಿದರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ತಿಮರೋಡಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಮಹೇಶ್‌ ತಿಮರೋಡಿ ವಿರುದ್ಧ ದೂರು ಸಹ ದಾಖಲಾಗಿತ್ತು. ಗುರುವಾರ (ಆ.21) ಪೊಲೀಸರು ಉಜಿರೆಯ ತಿಮರೋಡಿ ನಿವಾಸಕ್ಕೆ ತೆರಳಿ ಅವರನ್ನು ಬಂಧನ ಮಾಡಿದ್ದರು. ಪೊಲೀಸರು ಕೋರ್ಟ್‌ ಎದುರು ಅವರನ್ನು ಹಾಜರುಪಡಿಸಿದಾಗ ಕೋರ್ಟ್​ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದೀಗ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ತಿಮರೋಡಿಗೆ ಷರತ್ತು ಬದ್ಧ ಜಾಮೀನು ಮಂಜೂರು ನೀಡಲಾಗಿದೆ.

ವಶಕ್ಕೆ ಪಡೆದಿದ್ದು ಏಕೆ?

ಆಗಸ್ಟ್​ 16ರಂದು ತಿಮರೋಡಿ ಅವರು ಫೇಸ್​ಬುಕ್​ ಪೇಜ್​ನಲ್ಲಿ ಬಿ.ಎಲ್​. ಸಂತೋಷ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದಾದ ಬಳಿಕ ಉಡುಪಿಯ ಗ್ರಾಮಾಂತರ ಬಿಜೆಪಿ ಮಂಡಲಾಧ್ಯಕ್ಷ ರಾಜೀವ್​ ಕುಲಾಲ್​ ಎಂಬುವರು ದೂಡು ದಾಖಲಿಸಿದ್ದರು. ಹಿಂದು ಧರ್ಮದ ನಾಯಕನನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಕೇಳಿದ್ದರು. ಈ ಸಂಬಂಧ ತಿಮರೋಡಿಗೆ ವಿಚಾರಣೆಗೆ ಹಾಜರಾಗುವಂತೆ ಬ್ರಹ್ಮಾವರ ಪೊಲೀಸರು ನೋಟಿಸ್​ ನೀಡಿದ್ದರು. ಆದರೆ, ನೋಟಿಸ್​ಗೆ ಯಾವುದೇ ಉತ್ತರ ನೀಡದಿದ್ದಕ್ಕೆ ಪೊಲೀಸರೇ ಅವರ ಮನೆಗೆ ಬಂದು ವಶಕ್ಕೆ ಪಡೆದಿದ್ದರು.

(ಏಜೆನ್ಸೀಸ್)