ನ್ಯೂಸ್

ರಕ್ಷಣೆಗಾಗಿ ’ಹೈ’ ಕದತಟ್ಟಿದ್ದ ಮಹೇಶ ಜೋಶಿ : ಸರ್ಕಾರಕ್ಕೆ ನೋಟಿಸ್ ಜಾರಿ

ಬೆಂಗಳೂರು :  ಸೂಕ್ತ ಭದ್ರತೆ ಮತ್ತು ಪೊಲೀಸ್ ರಕ್ಷಣೆ ಒದಗಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ್ಯ ಡಾ. ಮಹೇಶ ಜೋಶಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.

ಅರ್ಜಿದಾರ ಪರ ಹಿರಿಯ ವಕೀಲ ಎಸ್. ಬಸವರಾಜ್ ವಾದ ಮಂಡಿಸಿ, ಮಹೇಶ ಜೋಶಿ 2021ರಿಂದ ಕಸಾಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ತರನಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುತ್ತಾರೆ. ಕಳೆದ ವರ್ಷ ಅವರು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಏರ್ಪಡಿಸಿದ್ದರು. ಅಂದಿನಿಂದ ಈ ಕ್ಷಣದವರೆಗೂ ದಿನಂಪ್ರತಿ ಜೀವ-ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ ಎಂದು ಪೀಠಕ್ಕೆ ವಿವರಿಸಿದರು.

ಓರ್ವ ವ್ಯಕ್ತಿ ‘ಮಂಡ್ಯ ಶಾಸಕರು ನನಗೆ ಅನುಮತಿ ನೀಡಿದ್ದಿದ್ದರೆ ನಾನು ವೇದಿಕೆಯ ಮೇಲೆ ಬಂದು ನಾಯಿಗೆ ಹೊಡೆದಂತೆ ಹೊಡೆದು ನಿನ್ನ ಸಾಯಿಸುತ್ತಿದ್ದೆ’ ಎಂದು ನಿರ್ಭೀತಿಯಿಂದ ಸಂದೇಶ ರವಾನಿಸಿದ್ದ. ಈ ಬಗ್ಗೆ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ. ಇದು ಒಂದು ಉದಾಹರಣೆಯಷ್ಟೇ. ಇಂತಹ ಹಲವು ಸಂದೇಶಗಳು ಬೆದರಿಕೆ ಕರೆಗಳು ನಿರಂತರವಾಗಿದೆ.

ಒಟ್ಟಾರೆಯಾಗಿ ಅವರ ಪ್ರಾಣಕ್ಕೆ ಅಪಾಯವಿರುವುದು ಸತ್ಯ. ಈ ವರ್ಷದ ಕೊನೆಯಲ್ಲಿ 88ನೇ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಈ ನಿಮಿತ್ತ ಕರ್ನಾಟಕದ ಗಡಿನಾಡು ಪ್ರದೇಶ ಸೇರಿ ರಾಜ್ಯದ ಹಲವೆಡೆ ಅರ್ಜಿದಾರರು ತೆರಳಬೇಕಿದೆ. ಹಾಗಾಗಿ ರಕ್ಷಣೆ ನೀಡಬೇಕು. ಈ ಹಿಂದೆ ಇದೇ ರೀತಿಯ ಸಂದರ್ಭ ಎದುರಾದಾಗ ಪೊಲೀಸ್ ರಕ್ಷಣೆ ನೀಡಿದ್ದು, ಬಳಿಕ ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಅರ್ಜಿದಾರರಿಗೆ ಮತ್ತೆ ಭಯದ ವಾತವರಣ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು. ದಿನದ 24 ಗಂಟೆಗಳ ಕಾಲ ಗನ್ ಮ್ಯಾನ್ ನೀಡಬೇಕು ಎಂದು ಕೋರಿದರು.

ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಗುರುವಾರ (ಮಾ.20)ಕ್ಕೆ ಮುಂದೂಡಿದೆ.

ಅರ್ಜಿಯಲ್ಲೇನಿದೆ?

2024ರ ಡಿ.21ರಂದು ರಾತ್ರಿ 10 ಗಂಟೆಗೆ ಮಂಡ್ಯದ ಹೋಟೆಲ್ ಅಮರಾವತಿಯಲ್ಲಿ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಂದಿನ ಜಿಲ್ಲೆ ಸ್ಥಳ ಆಯ್ಕೆ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮದ್ದೂರಿನ ಹರ್ಷ ಪೆನ್ನೆದೊಡ್ಡಿ ಮತ್ತಿತರರು ಅನುಮತಿ ಇಲ್ಲದೆ ಸಭಾಂಗಣಕ್ಕೆ ನುಗ್ಗಿ ಗದ್ದಲ ಎಬ್ಬಿಸಿ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲಿ ಹಾಜರಿದ್ದ ಹಲವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಇದಾದ ಬಳಿಕ ಅರ್ಜಿದಾರರಿಗೆ ಎಗ್ಗಿಲ್ಲದೇ ಜೀವ ಬೆದರಿಕೆ ಕರೆಗಳು ಬರುತ್ತಲೇ ಇವೆ. ಹೀಗಾಗಿ ರಕ್ಷಣೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.