ಮ್ಯಾಮ್ಕೋಸ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಎರಡನೇ ಅವಧಿಗೆ ಆಯ್ಕೆಯಾದ ಮಹೇಶ್ ಹುಲ್ಕುಳಿ ಅವರನ್ನು ಶ್ರೀಕಾಂತ್ ಬರುವೆ, ಕೃಷ್ಣಮೂರ್ತಿ, ರತ್ನಾಕರ್ ಮುಂತಾದವರು ಅಭಿನಂದಿಸಿದರು. 
ನ್ಯೂಸ್

ಮ್ಯಾಮ್ಕೋಸ್‌ಗೆ ಮತ್ತೊಮ್ಮೆ ಮಹೇಶ್ ಉಪಾಧ್ಯಕ್ಷ

ಶಿವಮೊಗ್ಗ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಮ್ಯಾಮ್ಕೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ) ಉಪಾಧ್ಯಕ್ಷರಾಗಿ ನಿರೀಕ್ಷೆಯಂತೆ ಎಚ್.ಎಸ್.ಮಹೇಶ್ ಹುಲ್ಕುಳಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಫೆ.4ರಂದು ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಭಾರತಿ ತಂಡದ ಸ್ಪರ್ಧಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಚುನಾವಣೆ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದ್ದ ಕಾರಣ ಅಧಿಕೃತವಾಗಿ ಫಲಿತಾಂಶ ಘೋಷಣೆ ವಿಳಂಬವಾಗಿತ್ತು.

2005ರಿಂದಲೂ ಮ್ಯಾಮ್ಕೋಸ್‌ನ ಚುಕ್ಕಾಣಿ ಹಿಡಿದಿರುವ ಸಹಕಾರ ಭಾರತಿ ಈಗ ಮತ್ತೊಂದು ಅವಧಿಗೆ ಆಡಳಿತ ಆರಂಭಿಸಿದೆ. ಮಹೇಶ್ ಹುಲ್ಕುಳಿ ಸತತ ನಾಲ್ಕು ಬಾರಿ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದು ಕಳೆದ ಬಾರಿ ಗೆದ್ದಿದ್ದ ಸಂದರ್ಭದಲ್ಲಿ 2021ರ ಸೆಪ್ಟೆಂಬರ್ 15ರಂದು ಇವರನ್ನು ಅವಿರೋಧವಾಗಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅಂದಿನಿಂದಲೂ ಇವರು ಅದೇ ಸ್ಥಾನದಲ್ಲಿದ್ದಾರೆ. ಈ ಸಂಸ್ಥೆಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವುದು ವಿಶೇಷ.

ತೀರ್ಥಹಳ್ಳಿಯ ಪುರುಷೋತ್ತಮ ರಾವ್ ಕೃಷಿ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಸದಸ್ಯರಾಗಿರುವ ಎಚ್.ಎಸ್.ಮಹೇಶ್, ಕೃಷಿ ಪರಿವಾರದವರು. ತೀರ್ಥಹಳ್ಳಿ ಹೇಮಾದ್ರಿ ಸೌಹಾರ್ದದ ಸಂಸ್ಥಾಪಕ ನಿರ್ದೇಶಕರೂ ಹೌದು. 2005ರಿಂದಲೂ ಸಹಕಾರ ಭಾರತಿಯೊಂದಿಗೆ ಗುರುತಿಸಿಕೊಂಡಿರುವ ಅವರು, 2010ರಲ್ಲಿ ಮೊದಲ ಬಾರಿಗೆ ಮ್ಯಾಮ್ಕೋಸ್ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದರು. ಬಳಿಕ 2015, 2020 ಹಾಗೂ 2025ರ ಚುನಾವಣೆಯಲ್ಲಿ ಸತತ ಗೆಲುವು ದಾಖಲಿಸಿದ್ದಾರೆ.

ಶುಕ್ರವಾರ ಮ್ಯಾಮ್ಕೋಸ್ ಕೇಂದ್ರ ಕಚೇರಿಯಲ್ಲಿ ಉಪಾಧ್ಯಕ್ಷರ ಹೆಸರು ಘೋಷಣೆಯಾದ ಬಳಿಕ ಸಂಘದ ನಿರ್ದೇಶಕರು, ವ್ಯವಸ್ಥಾಪಕ ಶ್ರೀಕಾಂತ್ ಬರುವೆ, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ತುಂಗಾ ಮೇಲ್ದಂಡೆ ವಿಶೇಷ ಭೂ ಸ್ವಾಧೀನಾಧಿಕಾರಿ ಆರ್.ಮೇಘನಾ ಮುಂತಾದವರು ಎಚ್.ಎಸ್.ಮಹೇಶ್ ಹುಲ್ಕುಳಿ ಅವನ್ನು ಅಭಿನಂದಿಸಿದರು.