ಹೈದ್ರಾಬಾದ್: ಕಳೆದ ವರ್ಷ ನವೆಂಬರ್ 15 ರಂದು ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ನಿಧನರಾದ ವಿಚಾರ ಗೊತ್ತೇ ಇದೆ. ಅವರು ನಿಧನರಾಗಿ ನಿನ್ನೆಗೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಕುಟುಂಬವು ಹೈದರಾಬಾದ್‌ನಲ್ಲಿ ಅವರನ್ನು ಪುಣ್ಯ ಸ್ಮರಣಾರ್ಥ ದಿನವನ್ನು ಆಯೋಜಿಸಿದೆ. ಈ ವೇಳೆ ಮಹೇಶ್ ಬಾಬು ಕುಟುಂಬಸ್ಥರು ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಹೇಶ್ ಬಾಬು ಅವರ ತಂದೆಯ ನಿಧನರಾಗಿ ಒಂದು ವರ್ಷ ಕಳೆದಿದೆ. ತಂದೆಯ ಮೊದಲ ಪುಣ್ಯ ಸ್ಮರಣಾರ್ಥ ವಾರ್ಷಿಕೋತ್ಸವದಂದು ಮಹೇಶ್ ಬಾಬು ಅವರು ತಂದೆ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧರಾಗಿದ್ದಾರೆ.
ಮಹೇಶ್ ಈಗಾಗಲೇ ಆಂಧ್ರಪ್ರದೇಶದ ಬುರ್ರಿಪಾಲಂ ಮತ್ತು ತೆಲಂಗಾಣದ ಸಿದ್ಧಾಪುರವನ್ನು ದತ್ತು ತೆಗೆದುಕೊಂಡು ಈ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿನಿಮಾಗಳಲ್ಲದೇ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಮಹೇಶ್ ಬಾಬು ತಮ್ಮ ಔದಾರ್ಯ ಮೆರೆದಿದ್ದಾರೆ. ಮಹೇಶ್ ಬಾಬು ಫೌಂಡೇಶನ್ ವತಿಯಿಂದ ಸೂಪರ್ ಸ್ಟಾರ್ ಕೃಷ್ಣ ಎಜುಕೇಶನಲ್ ಫಂಡ್ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಬಡತನದಿಂದ ಓದಲು ಸಾಧ್ಯವಾಗದ 40 ವಿದ್ಯಾರ್ಥಿಗಳಿಗೆ ಮಹೇಶ್ ಬಾಬು ಈ ಕಾರ್ಯಕ್ರಮದ ಮೂಲಕ ಶಿಕ್ಷಣ ನೀಡಲಿದ್ದಾರೆ. ಶಾಲೆಯಿಂದ ಕಾಲೇಜಿನವರೆಗೆ ಅವರ ಎಲ್ಲಾ ಶೈಕ್ಷಣಿಕ ಜವಾಬ್ದಾರಿಗಳನ್ನು ಮಹೇಶ್ ಬಾಬು ಅವರೇ ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಕನಸಿಗೆ ದಾರಿಯಾಗಲಿದ್ದಾರೆ.
ಮಹೇಶ್ ಬಾಬು ಅವರ ಪತ್ನಿ ನಮತ್ರ ಮಾತನಾಡಿ, ಈಗಾಗಲೇ ನಾಲ್ವರು ಬಡ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ, ನಾಳೆ ಎಷ್ಟು ಮಂದಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಮಾವ ಅವರ ಪುಣ್ಯತಿಥಿಯಂದು ನಾವು ಅವರ ಹೆಸರಿನಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಈಗಾಗಲೇ ನಾಲ್ಕು ಕ್ರಿಯಾಶೀಲ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಇನ್ನು ಮುಂದೆ ಅವರ ವಿದ್ಯಾಭ್ಯಾಸವನ್ನು ನಮ್ಮ ಎಂಬಿ ಫೌಂಡೇಶನ್ ನೋಡಿಕೊಳ್ಳಲಿದೆ. ಶಾಲೆಯಿಂದ ಎಷ್ಟೇ ಓದಿದರೂ ಎಲ್ಲ ಖರ್ಚನ್ನು ನಾವೇ ಭರಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಮಾವನವರ ಆಶೀರ್ವಾದವಿರಲಿ ಎಂದು ಹಾರೈಸುತ್ತೇವೆ. ಬಡ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದಷ್ಟು ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುವುದು ನಮ್ಮ ಉದ್ದೇಶವಾಗಿದೆ ಎಂದು ನಮ್ರತಾ ಹೇಳಿದರು.
ಎಂಬಿ ಫೌಂಡೇಶನ್ ಮೂಲಕ ಮಹೇಶ್ ಬಾಬು ಹಲವು ಮಕ್ಕಳಿಗೆ ಹೃದ್ರೋಗ ಚಿಕಿತ್ಸೆ ನೀಡಿದ್ದು ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಮಹೇಶ್ ಬಾಬು ಮಗಳು ಸಿತಾರಾ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಬಾಲ್ಯದಲ್ಲಿ ತಮ್ಮ ದೊಡ್ಡ ಮನಸ್ಸನ್ನು ತೋರಿಸುತ್ತಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಬಡ ಮಕ್ಕಳೊಂದಿಗೆ ಆಚರಿಸಿ ಅವರಿಗೂ ಸಹಾಯ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದು ತಂದೆಯಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮಹೇಶ್ ಬಾಬು ದಂಪತಿಯ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. 'ನಿಮ್ಮ ಹೃದಯ ಚಿನ್ನ ಸಾರ್' ಎಂದು ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.