ನ್ಯೂಸ್

ಪೊಲೀಸ್ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದ MAHE

ಬೆಂಗಳೂರು:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಬೆಂಗಳೂರು ಕ್ಯಾಂಪಸ್, ಮಣಿಪಾಲ ಆಸ್ಪತ್ರೆಗಳ (MHH) ಸಹಯೋಗದೊಂದಿಗೆ, ಶುಕ್ರವಾರ (ಜೂ.27) ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿತು.

ಯಲಹಂಕ ನ್ಯೂ ಟೌನ್‌ನ ಎಸಿಪಿ ನರಸಿಂಹ ಮೂರ್ತಿ, ಮಾಹೆ ಬೆಂಗಳೂರಿನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. ಮಧು ವೀರರಾಘವನ್ ಅವರು ಈ ಉಚಿತ ವೈದ್ಯಕೀಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಹೆ ಬೆಂಗಳೂರಿನ ಹೆಚ್ಚುವರಿ ರಿಜಿಸ್ಟ್ರಾರ್ ಶ್ರೀ ರಾಘವೇಂದ್ರ ಪ್ರಭು ಪಿ. ಮತ್ತು ಮಾಹೆ ಬೆಂಗಳೂರಿನ ಸಾಮಾನ್ಯ ಸೇವೆಗಳ ಉಪ ನಿರ್ದೇಶಕ ಶ್ರೀ ಬಸವರಾಜ್ ಎಸ್. ಕುಪ್ಪಸಾದ್ ಇದ್ದರು.

ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸುರಕ್ಷತೆಗಾಗಿ ಸದಾ ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಕಾಳಜಿ ವಹಿಸುವ ಭಾಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಸುಮಾರು 200 ಜನರು ಭಾಗವಹಿಸಿದ್ದರು.

ಬೆಳಿಗ್ಗೆ 8 ಗಂಟೆಗೆ ಶುರುವಾದ ವೈದ್ಯಕೀಯ ತಪಾಸಣಾ ಶಿಬಿರ ಮಧ್ಯಾಹ್ನದವರೆಗೆ ನಡೆಯಿತು. ಈ ಶಿಬಿರದಲ್ಲಿ ಬಾಡಿ ಮಾಸ್ ಇಂಡೆಕ್ಸ್ (BMI) ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಜನರಲ್ ರಾಂಡಮ್ ಬ್ಲಡ್ ಶುಗರ್ (GRBS) ಪರೀಕ್ಷೆ, ECG ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. ಪರೀಕ್ಷೆಯ ವರದಿಯನ್ನು ವೈದ್ಯರು ಸ್ಥಳದಲ್ಲೇ ವಿಶ್ಲೇಷಿಸಿದರು. ಇದರ ಜೊತೆಗೆ ಶಿಬಿರದಲ್ಲಿದ್ದ ಆಹಾರ ತಜ್ಞರು, ಯಾವೆಲ್ಲ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಿದರು. ವೈದ್ಯರು ಹೆಚ್ಚಿನ ತಪಾಸಣೆಗೆ ಸೂಚಿಸುವ ಸಿಬ್ಬಂದಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಹೊರರೋಗಿ ತಪಾಸಣೆ, ಪ್ರಯೋಗಾಲಯ ಪರೀಕ್ಷೆಗಳು ಮತ್ತು ರೇಡಿಯಾಲಜಿ ಸೇವೆಗಳಲ್ಲಿ 10% ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಹೇಳಲಾಯಿತು.

ಈ ಸಾಮಾಜಿಕ ಕೆಲಸದ ಕುರಿತು ಮಾತನಾಡಿದ ಮಾಹೆ ಬೆಂಗಳೂರಿನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. ಮಧು ವೀರರಾಘವನ್, ‘ನಮಗಾಗಿ ಶ್ರಮಿಸುವವರಿಗೆ ಪುಟ್ಟ ಕೃತಜ್ಞತೆಯನ್ನು ಸಲ್ಲಿಸುವ ಅಂಗವಾಗಿ ನಡೆದ ಈ ವೈದ್ಯಕೀಯ ಶಿಬಿರವು, ಸಮಾಜಕ್ಕೆ ಸ್ಪಂದಿಸುವ ಮಾಹೆಯ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸುರಕ್ಷತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ ಮತ್ತು ಈ ರೀತಿಯ ಅರ್ಥಪೂರ್ಣ ಕೆಲಸದ ಮೂಲಕ ಅವರ ಆರೋಗ್ಯದ ಕಾಳಜಿ ವಹಿಸುತ್ತಿರುವುದು ನಮಗೆ ಸಂತಸ ತಂದಿದೆ’ ಎಂದರು.

ಯಲಹಂಕ ನ್ಯೂ ಟೌನ್‌ನ ಎಸಿಪಿ ನರಸಿಂಹ ಮೂರ್ತಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿದರು. ಈ ವಿಶಿಷ್ಟ ಅಭಿಯಾನವು ತಮ್ಮ ಕೆಲಸದ ಸ್ವರೂಪ ಮತ್ತು ಕರ್ತವ್ಯ ಜವಾಬ್ದಾರಿಗಳಿಂದಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಪೊಲೀಸರಾಗಿ ಹಮ್ಮಿಕೊಳ್ಳಲಾಗಿತ್ತು.