ಭೀಮೇಶ್ವರ ದೇವಾಲಯದ ರಮಣೀಯ ನೋಟ. 
ನ್ಯೂಸ್

ಭೀಮೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ

ಕಾರ್ಗಲ್: ಪಶ್ಚಿಮ ಘಟ್ಟದ ದಟ್ಟಾರಣ್ಯದ ಗುಹೆಯ ತಪ್ಪಲಿನಲ್ಲಿ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟಿತ್ತು ಎನ್ನಲಾದ ಶ್ರೀಕ್ಷೇತ್ರ ಭೀಮೇಶ್ವರ ಮಂದಿರ ಮಲೆನಾಡಿನ ಐತಿಹಾಸಿಕ ದೇಗುಲಗಳಲ್ಲಿ ಒಂದು. ಕಾಳುಮೆಣಸಿನ ರಾಣಿ ಚನ್ನಭೈರಾದೇವಿ ಆರಾಧ್ಯ ದೈವವೂ ಆಗಿದ್ದ ಈ ದೇವಾಲಯ ಪ್ರಕೃತಿ ಸೌಂದರ್ಯದ ನಡುವೆ ನೆಲೆನಿಂತು ಭಕ್ತರನ್ನು ಆಕರ್ಷಿಸುತ್ತಿದೆ.

ದ್ವಾಪರ ಯುಗದಲ್ಲಿ ಪಾಂಡವರು ವನವಾಸದ ಸಂದರ್ಭ ಕೆಲವು ದಿನಗಳ ಕಾಲ ಈ ಸ್ಥಳದಲ್ಲಿ ತಂಗಿದ್ದರು ಎನ್ನಲಾಗುತ್ತದೆ. ಪಾಂಡವರು ವಾಸವಿದ್ದುದು ಮಹಾಶಿವರಾತ್ರಿಯ ಸಮಯವಾಗಿದ್ದರಿಂದ ಧರ್ಮರಾಯನ ಶಿವಪೂಜೆಗೆ ಅಡ್ಡಿಯಾಗದಂತೆ ಸಹೋದರ ಭೀಮನು ಕಾಶಿಯಿಂದ ಶಿವಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದನೆಂಬ ನಂಬಿಕೆ ಇದೆ.

ನೀರಿಗಾಗಿ ಅರ್ಜುನನು ಬಾಣವನ್ನು ಪ್ರಯೋಗಿಸಿ ಒಂದು ನದಿಯನ್ನೇ ಸೃಷ್ಟಿಸಿದನು. ಇಂದಿಗೂ ಬೆಟ್ಟದ ಮೇಲಿಂದ ಸಮೃದ್ಧವಾಗಿ ಇಲ್ಲಿ ನೀರು ಹರಿಯುತ್ತದೆ. ಇದನ್ನು ಸರಳ ಹೊಳೆ ಎಂದು ಕರೆಯಲಾಗುತ್ತದೆ. ದೇಗುಲದ ಪಕ್ಕದಲ್ಲಿರುವ ಅರಣ್ಯವನ್ನು ಹಿಡಿಂಬಾ ವನ ಎಂದು ಕರೆಯುತ್ತಿದ್ದು, ವನಸ್ಪತಿ ವನ ಎಂಬುದಾಗಿಯೂ ಕರೆಯಲಾಗುತ್ತದೆ. ಇಲ್ಲಿ ಹರಿಯುವ ನೀರು ಅತ್ಯಂತ ಪವಿತ್ರ್ಯ ಎಂದು ನಂಬಿಕೆಯಿದ್ದು, ಇಲ್ಲಿ ಬೀಳುವ ನೀರನ್ನೇ ದೇವರ ಅಭಿಷೇಕಕ್ಕೂ ಬಳಸಲಾಗುತ್ತದೆ.

ದೈವೀಶಕ್ತಿಯ ಪವಾಡ:

ಇಲ್ಲಿನ ಧಾರ್ಮಿಕ ವಿಧಿ ವಿಧಾನಗಳಲ್ಲಿ ಏನಾದರೂ ವ್ಯತ್ಯಾಸವಾದರೆ ಅಥವಾ ನೈರ್ಮಲ್ಯ ಇರದಿದ್ದರೆ ಜೇನು ಹುಳುಗಳು ಬಂದು ಪೂಜೆ ಸಲ್ಲಿಸಲು ಬಿಡುವುದಿಲ್ಲ ಎಂಬ ದೈವೀಶಕ್ತಿಯ ಪವಾಡವನ್ನು ಹೆಚ್ಚಿನ ಜನರು ನಂಬಿದ್ದಾರೆ. ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದ ಐದು ದಿನಗಳ ಕಾಲ 16 ಸೇರು ಅಕ್ಕಿಯನ್ನು ಅನ್ನ ಮಾಡಿ ದೇವರಿಗೆ ಸಮರ್ಪಿಸಿ, ನಂತರ ಪ್ರಸಾದವನ್ನು ಮಂಗಗಳಿಗೆ ನೀಡುವುದು ಇಲ್ಲಿಯ ವಿಶೇಷ. ಭಕ್ತರು ಮನೆಯಿಂದ ತಂದ ತುಪ್ಪವನ್ನು ಗಡಿಗೆಗೆ ಸುರಿದು ನಂತರ ದೇವರಿಗೆ ಅರ್ಪಿಸುತ್ತಾರೆ. ಈ ತುಪ್ಪವನ್ನು ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಔಷಧ ರೂಪದಲ್ಲಿ ಸೇವಿಸುವುದರಿಂದ ಕೈಕಾಲು ನೋವು ಸೇರಿ ಸಾಕಷ್ಟು ಸಮಸ್ಯೆಗಳು ವಾಸಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ.

ಬೆಳ್ಳಿ-ಬಂಗಾರದ ಒಡವೆ: ಭೀಮೇಶ್ವರ ದೇವರಿಗೆ ಹಾಕುವ ಮುಖವಾಡ ಹಾಗೂ ಅಲಂಕಾರದ ಸಾಮಗ್ರಿಗಳನ್ನು ಮೈಸೂರಿನ ಮಹಾರಾಜರು ಹಾಗೂ ಅಂದಿನ ಕಾಲದಲ್ಲಿ ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಜೈನ ಅರಸಿ ಕಾಳುಮೆಣಸಿನ ರಾಣಿ ಚನ್ನಾಭೈರಾದೇವಿ ನೀಡಿದ್ದಾಳೆಂದು ಹೇಳಲಾಗಿದೆ. ದೇವರ ಒಡವೆಗಳು ತಾಲೂಕಿನ ಮುಜರಾಯಿ ಇಲಾಖೆ ಖಜಾನೆಯಲ್ಲಿರುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ತಹಸೀಲ್ದಾರ್ ಮುಖೇನ ಪೊಲೀಸ್ ಭದ್ರತೆಯಲ್ಲಿ ಇಲ್ಲಿಗೆ ತಂದು ಪೂಜಿಸಲಾಗುತ್ತದೆ.

5 ದಿನಗಳ ಶಿವರಾತ್ರಿ ಉತ್ಸವ: ಮಹಾಶಿವರಾತ್ರಿ ಪ್ರಯುಕ್ತ ೆ.25ರಿಂದ ಮಾ.1ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನಸಂತರ್ಪಣಾ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಸಮಿತಿ ತಿಳಿಸಿದೆ. ಉತ್ಸವದ ಐದು ದಿನಗಳ ಕಾಲ ಭೋಜನದ ವ್ಯವಸ್ಥೆ ಇರುತ್ತದೆ. ಆದರೆ ಶಿವರಾತ್ರಿಯ ದಿನವಾದ ಬುಧವಾರ ಮಾತ್ರ ಉಪವಾಸ ಆಚರಿಸುವ ಹಿನ್ನೆಲೆಯಲ್ಲಿ ಉಪಾಹಾರದ ವ್ಯವಸ್ಥೆ ಇರುತ್ತದೆ.

ದೇವಾಲಯ ತಲುಪಲು ಮಾರ್ಗ: ಸಾಗರದಿಂದ ಕಾರ್ಗಲ್‌ಗೆ ಬಂದು ಇಲ್ಲಿಂದ ಭಟ್ಕಳ ಮಾರ್ಗದಲ್ಲಿ 36 ಕಿ.ಮೀ ದೂರದಲ್ಲಿ ಕೋಗಾರ್ ಘಟ್ಟವನ್ನು ಇಳಿಯುವ ಮಾರ್ಗದಲ್ಲಿ ಶ್ರೀ ಭೀಮೇಶ್ವರ ಕ್ಷೇತ್ರವಿದೆ. ಈ ಮುಖ್ಯರಸ್ತೆಯಿಂದ ಸುಮಾರು 2 ಕಿ.ಮೀ ದೂರ ದಟ್ಟ ಕಾನನದೊಳಗೆ ತೆರಳಬೇಕು. ಕಾರುಗಳಲ್ಲಿ ತೆರಳುವುದು ಕಷ್ಟಸಾಧ್ಯ. ವಾಹನವನ್ನು ಮುಖ್ಯರಸ್ತೆಯಲ್ಲಿ ಬಿಟ್ಟು ಸ್ಥಳೀಯರ ಜೀಪಿನಲ್ಲಿ ಹೋಗುವುದು ಒಳಿತು. ನಡೆದುಕೊಂಡು ಕೂಡ ಹೋಗಬಹುದು.