ಬೆಂಗಳೂರು: ಆಲ್ಮಟ್ಟಿ ಅಣೆಕಟ್ಟೆ ಎತ್ತರವನ್ನು 519 ರಿಂದ 524.256 ಮೀಟರ್ ಗೆ ಹೆಚ್ಚಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಹೊಸದಾಗಿ ಕ್ಯಾತೆ ತೆಗೆದಿರುವುದು ಅಚ್ಚರಿ ಜತೆಗೆ ಆಘಾತ ಉಂಟು ಮಾಡಿದೆ ಎಂದು ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕಳವಳ ವ್ಕಕ್ತಪಡಿಸಿದರು.
ವಿಧಾನಸೌಧದಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೇ 9ರಂದು ಬರೆದ ಪತ್ರದ ಪ್ರಕಾರ ಆಲ್ಮಟ್ಟಿ ಅಣೆಕಟ್ಟೆಯ ಎಫ್ ಆರ್ ಎಲ್ ಎತ್ತರ ಹೆಚ್ಚಳದಿಂದ ಹಿನ್ನೀರು ಏರಿಕೆಯಾಗಿ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಮತ್ತಿತರ ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿ ತೊಂದರೆಯಾಗಲಿದ್ದು, ಉದ್ದೇಶಿತ ಎತ್ತರ ಹೆಚ್ಚಳ ಕೈಬಿಡಲು ಕೋರಿದ್ದಾರೆ.
ಕೃಷ್ಣಾ ಎರಡನೇ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಕುರಿತು ಕೇಂದ್ರ ಜಲಶಕ್ತಿ ಸಚಿವರು ಮೇ 7ರಂದು ನಾಲ್ಕು ರಾಜ್ಯಗಳ ಸಭೆ ನಿಗದಿ ಮಾಡಿದ್ದರು. ಅನಿವಾರ್ಯ ಕಾರಣಗಳಿಂದ ಈ ಸಭೆ ಹಠಾತ್ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ನೀಡಲಾಯಿತು. ದೆಹಲಿಗೆ ಹೋದರೂ ಮುಂಚಿತವಾಗಿ ಕಾಲಾವಕಾಶ ಪಡೆದಿದ್ದ ಕೇಂದ್ರ ಸಚಿವರಿಗೆ ಭೇಟಿಯಾಗಿ ವಾಪಸ್ಸಾಗಬೇಕಾಯಿತು ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಮಹಾರಾಷ್ಟ್ರ ಹೊಸದಾಗಿ ತಗಾದೆ ತೆಗೆದಿರುವುದರಲ್ಲಿ ರಾಜಕೀಯ ಬೆರೆಸಲು ಬಯಸಲ್ಲ. ನೆರೆಯ ರಾಜ್ಯಗಳ ಜತೆಗೆ ಜಗಳಕ್ಕಿಂತ ರಾಜ್ಯದ ಹಿತ ಮುಖ್ಯವಾಗಿದೆ. ಆದರೆ ಕೇಂದ್ರ ಜಲಶಕ್ತಿ ಸಚಿವರು ಕರೆದಿದ್ದ ನಾಲ್ಕು ರಾಜ್ಯಗಳ ಸಭೆಯು ದಿಢೀರ್ ರದ್ದಾದ ಎರಡೇ ದಿನಗಳಲ್ಲಿ ಮಹಾ ಸಿಎಂ ಆಕ್ಷೇಪ ಎತ್ತಿ ರಾಜ್ಯದ ಸಿಎಂಗೆ ಪತ್ರ ಬರೆದಿದ್ದು ಕಾಕತಾಳೀಯ ಎಂಬಂತಾಗಿದೆ ಎಂದರು.
ಕೃಷ್ಣಾ ಎರಡನೇ ನ್ಯಾಯಾಧಿಕರಣವು ಬಿ ಸ್ಕೀಮ್ ನಡಿ ಹೆಚ್ಚುವರಿ ನೀರು ಹಂಚಿಕೆಗೆ ನಡೆದ ವಿಚಾರಣೆ, ಅಂತಿಮ ತೀರ್ಪು, ಸ್ಪಷ್ಟೀಕರಣದ ಆದೇಶ ನೀಡುವ ಸಂದರ್ಭದಲ್ಲಿ ಮಹಾರಾಷ್ಟ್ರ ಆಲ್ಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಅಪಸ್ವರ ತೆಗೆದಿಲ್ಲ. ಅಂತಿಮ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಕಾನೂನು ಹೋರಾಟಕ್ಕೆ ಕೈಜೋಡಿಸಿದೆ ( ಇಂಪ್ಲಾಯ್ಡ್) ಅಷ್ಟೇ ಅಲ್ಲ, ಯಾವುದೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಈಗ ಇದ್ದಕ್ಕಿದ್ದಂತೆ ಆಲ್ಮಟ್ಟಿ ಅಣೆಕಟ್ಟೆ ಹಿನ್ನೀರ ಗಡಿಯಲ್ಲಿನ ಮಹಾರಾಷ್ಟ್ರ ಜಿಲ್ಲೆಗಳಿಗೆ ಪ್ರವಾಹದ ಸಮಸ್ಯೆಯಾಗಲಿದೆ ಎಂದು ತಗಾದೆ ತೆಗೆದಿದೆ. ಕೃಷ್ಣಾ ಪ್ರವಾಹದಿಂದ ರಾಜ್ಯದಲ್ಲಿ ಆಂತರಿಕವಾಗಿ ತಲೆದೋರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ ಅವರ ಆಂತರಿಕ ಸಮಸ್ಯೆ ಅವರೇ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರದ ಸಿಎಂ ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಪ್ರತ್ಯುತ್ತರವಾಗಿ ಸಿಎಂ ಪತ್ರ ಬರೆಯಲಿದ್ದಾರೆ. ಕೃಷ್ಣಾ ಎರಡನೇ ನ್ಯಾಯಾಧಿಕರಣ ರಾಜ್ಯಕ್ಮೆ ಹಂಚಿಕೆ ಮಾಡಿದ ನೀರು ನಮ್ಮದು, ಅದನ್ನು ಬಳಕೆ ಮಾಡುವುದೂ ನಮ್ಮ ಹಕ್ಕು . ಈ ವಿಷಯದಲ್ಲಿ ಅಗತ್ಯಬಿದ್ದರೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮ ಪಾಲಿನ ನೀರು ಬಳಕೆ ಉದ್ದೇಶಿತ ಯೋಜನೆಗಳಿಗೆ ಬೇಕಾದ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಂದಾಜು ವೆಚ್ಚದ ಗಾತ್ರ ಒಂದು ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಮತ್ತಷ್ಟು ಅಡೆತಡೆಯಿಂದ ಯೋಜನೆಗಳ ಅನುಷ್ಠಾನ, ನೀರು ಬಳಕೆಗೆ ಅಡ್ಡಿಯಾಗಲಿದೆ. ಜತೆಗೆ ಯೋಜನಾಗಾತ್ರವು ಹೆಚ್ಚಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರು, ಸಂಸದರ ಜವಾಬ್ದಾರಿ ದೊಡ್ಡದಿದೆ. ಪ್ರಧಾನಿ, ಜಲಶಕ್ತಿ ಸಚಿವರ ಮೇಲೆ ಒತ್ತಡ ತರಬೇಕು. ಭೇಟಿಗೆ ಕಾಲಾವಕಾಶ ಪಡೆದು, ರಾಜ್ಯದ ನಿಲುವು, ಮಹಾರಾಷ್ಟ್ರ ಇಷ್ಟು ದಿನ ಮೌನವಹಿಸಿ ಈಗ ತಕರಾರು ತೆಗೆದಿದ್ದರಲ್ಲಿ ಹುರುಳಿಲ್ಲವೆಂದು ಮನವರಿಕೆಗೆ ಅನುವು ಮಾಡಿಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.