ನ್ಯೂಸ್

ಸ್ಮಾರ್ಟ್​​ಫೋನ್​ ಆರ್ಡರ್ ಮಾಡಿದ್ದ ಯುವಕನಿಗೆ ಶಾಕ್​; ಈತ ಬಾವಿಗೆ ಹಾರಿ ಜೀವ ಬಿಟ್ಟ

ಚಂದ್ರಾಪುರ್​: ಸಣ್ಣಸಣ್ಣ ವಿಚಾರಗಳಿಗೆ ಹದಿಹರೆಯದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಆಗಿಬಿಟ್ಟಿದೆ. ಮಹಾರಾಷ್ಟ್ರದ 18ವರ್ಷದ ಯುವಕನೋರ್ವ ಆನ್​ಲೈನ್ ಶಾಪಿಂಗ್​ನಲ್ಲಿ 15,000 ರೂಪಾಯಿ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಮೂರ್ ತಹಸಿಲ್‌ನ ಪುಯುರ್​ದಂದ್​ನ ನಿವಾಸಿ ರೋಹಿತ್​ ರಾಜೇಂದ್ರ ಜಂಭುಲೆ ಎಂಬಾತ ಆನ್​ಲೈನ್​ನಲ್ಲಿ ಸ್ಮಾರ್ಟ್​ಫೋನ್​ ಆರ್ಡರ್​ ಮಾಡಲು ಹೋಗಿ 15,000 ರೂಪಾಯಿ ಕಳೆದುಕೊಂಡಿದ್ದ. ಈತ ಬಡಕುಟುಂಬದವನಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಮೊಬೈಲ್​ ಖರೀದಿಗೆ ಮುಂದಾಗಿದ್ದ. ಹಣ ಅನ್ಯಾಯವಾಗಿ ಕಳೆದುಹೋಗಿದ್ದರಿಂದ ಶಾಕ್​ ಆಗಿದ್ದ. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಷ್ಟಪಟ್ಟು ಹಣ ಸಂಗ್ರಹಿಸಿದ ಆನ್​ಲೈನ್​ನಲ್ಲಿ ಒಂದು ಒಳ್ಳೆ ಮೊಬೈಲ್​ ಆರ್ಡರ್ ಮಾಡಿದ್ದ. ಬಾಕ್ಸ್ ಸ್ಥಳೀಯ ಪೋಸ್ಟ್ ಆಫೀಸ್​ಗೆ ಬಂದಿತ್ತು. ಅಮ್ಮನೊಂದಿಗೆ ಹೋಗಿ ಅದನ್ನು ತೆಗೆದುಕೊಂಡು ಬಾಕ್ಸ್ ತೆರೆದಾಗ ಶಾಕ್​ ಕಾದಿತ್ತು. ಅದರಲ್ಲಿ ಮೊಬೈಲ್​ ಬದಲು ಎರಡು ಪರ್ಸ್​ಗಳು, ಬೆಲ್ಟ್​ ಇತ್ತು. ಈತ ಕೊಟ್ಟಿದ್ದ 15,000 ರೂ. ಅನ್ಯಾಯವಾಗಿ ಹಾಳಾಗಿತ್ತು.

ಲಭ್ಯವಿದ್ದ ಮೊಬೈಲ್​ ನಂಬರ್​ಗೆ ಆತ ಕರೆ ಮಾಡಿದರೆ, ಅದು ಕನೆಕ್ಟ್ ಆಗಲಿಲ್ಲ. ಇದರಿಂದ ತೀವ್ರವಾಗಿ ಮನನೊಂದಿದ್ದ ಯುವಕ ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಶವ ಶುಕ್ರವಾರ ಪತ್ತೆಯಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)