ನ್ಯೂಸ್

Maharashtra poll | ಶರದ್ ಪವಾರ್ ಫೋಟೋ ವಿಡಿಯೋ ಬಳಸದಂತೆ ಎನ್​​ಸಿಪಿಗೆ ‘ಸುಪ್ರೀಂ’ ಸೂಚನೆ

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ(Maharashtra poll) ಮುನ್ನ ಶರದ್ ಪವಾರ್ ಅವರ ಯಾವುದೇ ಫೋಟೋಗಳು, ವಿಡಿಯೋಗಳು ಅಥವಾ ಚಿತ್ರಗಳನ್ನು ಬಳಸದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಬಣಕ್ಕೆ ಸುಪ್ರೀಂಕೋರ್ಟ್ ಬುಧವಾರ(ನವೆಂಬರ್​​ 13) ಸೂಚಿಸಿದೆ. ಅವರು ತಮ್ಮ ಪ್ರತ್ಯೇಕ ಗುರುತಿನ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ಶರದ್ ಪವಾರ್ ಅವರ ಚಿತ್ರಗಳು ಮತ್ತು ವಿಡಿಯೋಗಳನ್ನು ಬಳಸದಂತೆ ಅವರ ಪಕ್ಷದ ಸದಸ್ಯರಿಗೆ ಸೂಚಿಸುವಂತೆ ನ್ಯಾಯಾಲಯವು ಅಜಿತ್ ಪವಾರ್ ಅವರಗೆ ಹೇಳಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗಡಿಯಾರದ ಚಿಹ್ನೆಯನ್ನು ಅಜಿತ್ ಪವಾರ್ ಬಳಸುವುದನ್ನು ತಡೆಯುವಂತೆ ಕೋರಿ ಶರದ್ ಪವಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಈಗ ಶರದ್ ಪವಾರ್ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವುದರಿಂದ ನಿಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವುದನ್ನು ಕಲಿಯಿರಿ. ಒಮ್ಮೆ ನೀವು ಶರದ್ ಪವಾರ್‌ನಿಂದ ಬೇರ್ಪಟ್ಟ ನಂತರ ನೀವು ಅವರ ಹೆಸರು, ಫೋಟೋ ಅಥವಾ ವಿಡಿಯೋವನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್​ ಹೇಳಿದ್ದಾಗಿ ಬಾರ್​ ಆ್ಯಂಡ್​ ಬೆಂಚ್​ ವರದಿಯಲ್ಲಿದೆ.

ಇದಕ್ಕೂ ಮೊದಲು, ಗಡಿಯಾರದ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಹಕ್ಕು ನಿರಾಕರಣೆ ಪ್ರಕಟಿಸುವಂತೆ ಅಜಿತ್ ಪವಾರ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಕಳೆದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ಅಜಿತ್ ಪವಾರ್ ಬಣಕ್ಕೆ 36 ಗಂಟೆಗಳ ಒಳಗೆ ಪತ್ರಿಕೆಗಳಲ್ಲಿ, ವಿಶೇಷವಾಗಿ ಮರಾಠಿ ಭಾಷೆಯ ಪತ್ರಿಕೆಗಳಲ್ಲಿ ಹಕ್ಕು ನಿರಾಕರಣೆ ನೀಡುವಂತೆ ಆದೇಶಿಸಿತ್ತು.

ನವೆಂಬರ್ 19ಕ್ಕೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂಕೋರ್ಟ್​​​ ಯಾರಿಗೆ ಮತ ಹಾಕಬೇಕೆಂದು ತಿಳಿದಿರುವ ಮತದಾರರ ಬುದ್ಧಿವಂತಿಕೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದೆ.ಅಲ್ಲದೆ ಮಹಾರಾಷ್ಟ್ರ ಚುನಾವಣೆಯ ಸಲುವಾಗಿ ಬಿಸಿ ಪ್ರಚಾರವನ್ನೂ ಮುಂದುವರಿಸುತ್ತಿರುವ ಎರಡು ಬಣಗಳಿಗೆ ತಮ್ಮ ಕೆಲಸದ ಕಡೆ ಗಮನಹರಿಸಬೇಕು ಎಂದು ಹೇಳಿದೆ.(ಏಜೆನ್ಸೀಸ್​​)