ನ್ಯೂಸ್

‘ಮಹಾ’ ಸಿಎಂ ಸಮಸ್ಯೆ; ಇಂದು ನಡೆಯಬೇಕಿದ್ದ ಸಭೆ ರದ್ದು.. ಸ್ವಗ್ರಾಮಕ್ಕೆ ತೆರಳಿದ ಏಕನಾಥ್ ಶಿಂಧೆ (Eknath Shinde)

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಶ್ನಾತೀತವಾಗಿ ಗೆದ್ದಿರುವ ಮಹಾಯುತಿ ಮೈತ್ರಿಕೂಟಕ್ಕೆ ಸರ್ಕಾರ ರಚನೆ ಮಾತ್ರ ಕಗ್ಗಂಟಾಗಿದೆ. ಸರ್ಕಾರ ರಚನೆಯ ಅಂಗವಾಗಿ ಶುಕ್ರವಾರ(ನವೆಂಬರ್​ 29) ನಡೆಯಬೇಕಿದ್ದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಸಭೆಯನ್ನು ರದ್ದುಗೊಳಿಸಲಾಗಿದೆ.

ಮೂಲಗಳ ಪ್ರಕಾರ ಇಂದು ನಡೆಯಬೇಕಿದ್ದ ಸಭೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸಿಎಂ ಏಕನಾಥ್ ಶಿಂಧೆ(Eknath Shinde) ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದು, ನಾಳೆ ವಾಪಸಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು ಮಹಾಯುತಿಯ ಮೂವರು ದೊಡ್ಡ ನಾಯಕರು - ಸಿಎಂ ಶಿಂಧೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ದೆಹಲಿಯಲ್ಲಿ ಅಮಿತ್ ಷಾ ಅವರೊಂದಿಗೆ ಸುಮಾರು 3 ಗಂಟೆಗಳ ಮ್ಯಾರಥಾನ್ ಸಭೆ ನಡೆಸಿದರು.

ನಿನ್ನೆ ಸಂಜೆ ತಡರಾತ್ರಿ ಗೃಹ ಸಚಿವ ಅಮಿತ್ ಷಾ ದೆಹಲಿಯ ತಮ್ಮ ನಿವಾಸದಲ್ಲಿ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ಎನ್‌ಸಿಪಿ ಸಂಸದ ಸುನೀಲ್ ತಟ್ಕರೆ ಕೂಡ ಅಮಿತ್​ ಷಾ ಅವರ ಮನೆಗೆ ಭೇಟಿ ನೀಡಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದರು ಸಿಎಂ ಹೆಸರು ನಿರ್ಧರಿಸಲು ಸಾಧ್ಯವಾಗಲಿಲ್ಲ.

ಸಭೆಯ ನಂತರ ಮೂವರೂ -ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ತಡರಾತ್ರಿ ಮುಂಬೈಗೆ ಮರಳಿದರು. ಈ ಸಭೆಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಸಭೆ ಉತ್ತಮ ಮತ್ತು ಸಕಾರಾತ್ಮಕವಾಗಿತ್ತು ಎಂದು ಹೇಳಿದ್ದಾರೆ. ಇದು ಮೊದಲ ಸಭೆಯಾಗಿತ್ತು, ಇದರಲ್ಲಿ ಅಮಿತ್​​​ ಷಾ ಮತ್ತು ಜೆಪಿ ನಡ್ಡಾ ಭೇಟಿಯಾದರು. ಮಹಾಯುತಿ ನಾಯಕರು ಮುಂಬೈನಲ್ಲಿ ಎರಡನೇ ಸಭೆ ನಡೆಸಲಿದ್ದು, ಇದರಲ್ಲಿ ಸಿಎಂ ಹೆಸರಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಏಕನಾಥ್ ಶಿಂಧೆ ಅವರು ಏಕಾಏಕಿ ಸತಾರಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳಿದ್ದು ಇಂದು ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ. ಅವರು ಶನಿವಾರ ಸತಾರಾದಿಂದ ಹಿಂದಿರುಗಿದ ನಂತರ ಈ ಸಭೆ ಮತ್ತೆ ನಡೆಯಲಿದ್ದು ಉಳಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ. 280 ಸದಸ್ಯ ಬಲದ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಆದರೆ ಅದರ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದವು.(ಏಜೆನ್ಸೀಸ್​​)